ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಕಾರ್ಮಿಕ ಬಲಿ; ಸೆರೆಗೆ ಸಾಕಾನೆಗಳ ತಂಡ ಆಗಮನ
ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕ ಯಲ್ಲಪ್ಪ (45) ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ, ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತ್ವರಿತ ಕಾರ್ಯಾಚರಣೆ ಆರಂಭಿಸಿದೆ.
ನಾಲ್ಕು ದಿನಗಳ ಹಿಂದೆ (ಸೋಮವಾರ) ನಡೆದ ಈ ದುರಂತದ ನಂತರ ಸ್ಥಳೀಯ ರೈತರು ಮತ್ತು ನಿವಾಸಿಗಳು ಬಾಳೆಹೊನ್ನೂರು ಅರಣ್ಯ ಇಲಾಖೆಯ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಕ್ಷಣವೇ ಆನೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ರೈತರ ಒತ್ತಡಕ್ಕೆ ಮಣೆದ ಅರಣ್ಯ ಇಲಾಖೆಯು ತಕ್ಷಣ ಕ್ರಮ ಕೈಗೊಂಡಿದ್ದು, ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಐದು ಸಾಕಾನೆಗಳ ತಂಡವನ್ನು ಚಿಕ್ಕಮಗಳೂರಿಗೆ ಕರೆತರಲಾಗಿದೆ.
ಈ ತಂಡ ಇಂದು ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮಕ್ಕೆ ಆಗಮಿಸಿದೆ. ಐದು ಸಾಕಾನೆಗಳಲ್ಲಿ ಮೂರು ಆನೆಗಳನ್ನು ನರಹಂತಕ ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಬಳಸಲು ಸರ್ಕಾರ ಆದೇಶಿಸಿದೆ. ಉಳಿದ ಎರಡು ಸಾಕಾನೆಗಳಿಗೆ ರೇಡಿಯೋ ಕಾಲರ್‌ಗಳನ್ನು ಅಳವಡಿಸಿ, ಅವುಗಳ ಚಲನವಲನವನ್ನು ಗಮನಿಸುವಂತೆ ಸೂಚನೆ ನೀಡಲಾಗಿದೆ.
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಅವರು ಮನೆಗೆ ಹೋಗುವ ದಾರಿಯಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿ ತುಳಿದು ಕೊಂದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಮೂಲದ ಯಲ್ಲಪ್ಪ ಅವರು ನಾಗೇಶ್ ಗೌಡ ಅವರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಲೆನಾಡಿನಲ್ಲಿ ಮಾನವ-ಕಾಡಾನೆ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ಕಾರ್ಯಾಚರಣೆಯು ಸ್ಥಳೀಯರಲ್ಲಿ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆಯು ತ್ವರಿತವಾಗಿ ಕಾಡಾನೆಯನ್ನು ಸೆರೆ ಹಿಡಿದು ಸ್ಥಳೀಯರ ಸುರಕ್ಷತೆ ಖಾತರಿಪಡಿಸುವಂತೆ ಒತ್ತಾಯಿಸಲಾಗುತ್ತಿದೆ.
A team of livestock arrives to capture a manipulative elephant
Leave a comment