ಚಿಕ್ಕಮಗಳೂರು: ರೋಗಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿರುವ ಆರೋಪವೊಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಕೇಳಿ ಬಂದಿದೆ.
ಆಲ್ಲೂರು ಸಮೀಪದ ಗಾಳಿಗಂಡಿಯ ಲಕ್ಷ್ಮಣ್ (46) ಮೃತ ವ್ಯಕ್ತಿ.
ಗುರುವಾರ ಮಧ್ಯಾಹ್ನ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಲಕ್ಷ್ಮಣ್ ಕುಟುಂಬಸ್ಥರು ದೂರಿದ್ದಾರೆ.
ತುರ್ತು ಸಂದರ್ಭದಲ್ಲಿ ರೋಗಿಯನ್ನು ಕರೆದೊಯ್ಯಲು ಕನಿಷ್ಠ ವೀಲ್ಚೇರ್ ವ್ಯವಸ್ಥೆ ಕೂಡ ಮಾಡದೆ ವಿಳಂಬ ಮಾಡಿದ್ದರಿಂದಲೇ ಲಕ್ಷ್ಮಣ್ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ತವ್ಯ ಲೋಪ ಎಸಗಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಜಿಲ್ಲಾ ಸರ್ಜನ್ ಅವರಿಗೆ ಮನವಿ ಸಲ್ಲಿಸಿದರು.
ಘಟನೆ ಕುರಿತು ಜಿಲ್ಲಾ ಸರ್ಜನ್ ಡಾ। ಚಂದ್ರಶೇಖರ್ ಮಾತನಾಡಿ, ಮೃತ ಕುಟುಂಬಸ್ಥರ ದೂರಿನ ಅನ್ವಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆಸ್ಪತ್ರೆಯಲ್ಲಿ ನಡೆದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಚಿಕಿತ್ಸೆಯಲ್ಲಿ ವಿಳಂಬವಾಗಿರುವುದು ಸಾಬೀತಾದರೆ ಅವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ತಿಳಿಸಿದ್ದಾರೆ.
Patient dies due to lack of timely treatment at district hospital
Leave a comment