ಚಿಕ್ಕಮಗಳೂರು: ‘ಸಾರ್ವಜನಿಕರ ರಕ್ಷಣೆ ಹಾಗೂ ಸುರಕ್ಷತೆಗೆ ಸಮಯ ಮೀಸಲಿಡುವ ಪೊಲೀಸ್ ಸಿಬ್ಬಂದಿಗೆ ಕ್ರೀಡಾಕೂಟಗಳು ಶಿಸ್ತು, ಸಂಯಮ, ಒಗ್ಗಟ್ಟು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿವೆ’ ಎಂದು ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗ್ಡೆ ತಿಳಿಸಿದರು.
ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆಟದ ಮೈದಾನದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆ ಏರ್ಪಡಿಸಿದ್ದ ವಾರ್ಷಿಕ ಜಿಲ್ಲಾಮಟ್ಟದ ಪೊಲೀಸ್ ಕ್ರೀಡಾಕೂಟವನ್ನು ಪಾರಿವಾಳ, ತ್ರಿವರ್ಣ ಧ್ವಜ ಬಣ್ಣದ ಬಲೂನ್ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಒತ್ತಡದ ಜತೆಗೆ ಸಮಾಜದ ರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಬಹಳ ಮಹತ್ವದ್ದಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ಆತ್ಮಸ್ಥೈರ್ಯ ಹೆಚ್ಚಾಗುವುದಲ್ಲದೇ, ದೈಹಿಕವಾಗಿ ಸದೃಢಗೊಳ್ಳುತ್ತದೆ’ ಎಂದರು.
ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ, ಕ್ರೀಡಾಕೂಟಗಳಲ್ಲಿ ಸ್ಪರ್ಧೆ ಮನೋಭಾವದಿಂದ ಭಾಗವಹಿಸಿದಾಗ ಮಾತ್ರ ಸಮಚಿತ್ತದೊಂದಿಗೆ ಸಮಾನತೆ, ಗೌರವ ಭಾವನೆ ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಸಮಾಜದ ಭದ್ರತೆಗಾಗಿ ಸೇವಾ ಕರ್ತವ್ಯನಿರತ ಪೊಲೀಸರು ಮಾನಸಿಕ ಒತ್ತಡಗಳ ನಿವಾರಣೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದ ಅವರು, ಕ್ರೀಡೆಯಿಂದ ಒತ್ತಡಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮಾತನಾಡಿ, ಪೊಲೀಸರು ಒಂದು ತಂಡವಾಗಿ ಎಚ್ಚರಿಕೆಯಿಂದ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕರ್ತವ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದೇವೆ ಎಂದರು.
ಕ್ರೀಡಾಕೂಟದಲ್ಲಿ ಅಧಿಕಾರಿಗಳು ಪೇದೆ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸಮಾನವಾಗಿ ತಾರತಮ್ಯವಿಲ್ಲದೆ ಕ್ರೀಡಾ ಮನೋಭಾವದಿಂದ ಭಾಗವಹಿಸುವ ಮೂಲಕ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ ನಾಯ್ಕ್, ಹಿರಿಯ ಕ್ರೀಡಾಪಟು ನರೇಂದ್ರ ಪೈ ಭಾಗವಹಿಸಿದ್ದರು.
Sports events help boost confidence of police personnel
Leave a comment