ಚಿಕ್ಕಮಗಳೂರು: ಮಾದರಿ ಗ್ರಾಮ ಪಂಚಾಯಿತಿ ಮಾಡುವ ಉದ್ದೇಶದಿಂದ ರಾಜ್ಯಸರ್ಕಾರ ಜಾರಿಗೆ ತಂದಿರುವ ಕಾಯಕ ಗ್ರಾಮ ಯೋಜನೆಯಡಿ ತಾಲ್ಲೂಕಿನ ೬ ಗ್ರಾಮ ಪಂಚಾಯಿತಿಗಳನ್ನು ಗುರ್ತಿಸಿ ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ಶಂಕರ್ ಕೊರವರ್ ತಿಳಿಸಿದರು.
ಅವರು ಇಂದು ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕಿನ ವಾರ್ಷಿಕ ಕರಡು ಯೋಜನೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ. ಆಲ್ದೂರು, ಮೇಲಿನಹುಲುವತ್ತಿ, ಆಣೂರು, ಕಡವಂತಿ ಸೇರಿದಂತೆ ೬ ಗ್ರಾಮ ಪಂಚಾಯಿತಿಗಳನ್ನು ಗುರ್ತಿಸಲಾಗಿದೆ ಎಂದರು.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಏನೇನು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಹಾಗೂ ಪಂಚಾಯಿತಿಯ ಬೇಡಿಕೆ ಕೊರತೆಗಳನ್ನು ಗುರುತಿಸಿ ಪಟ್ಟಿ ತಯಾರಿಸಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತೆರಿಗೆ ವಸೂಲಿ, ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಅವಶ್ಯಕತೆಗಳಿಗೆ ಉದ್ಯೋಗಾಧಾರಿತ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶವಿದ್ದು, ಪಟ್ಟಿಮಾಡಿ ಕ್ರಿಯಾಯೋಜನೆ ತಯಾರಿಸಲು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಎಲ್ಲಾ ಇಲಾಖಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಗ್ರಾಮ ಸಭೆಗಳಿಗೆ ತಪ್ಪದೆ ಕಡ್ಡಾಯವಾಗಿ ಹಾಜರಾಗಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ ನೀಡಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಮೂಲಕ ಸೌಲಭ್ಯಗಳನ್ನು ನೀಡುವ ಬಗ್ಗೆ ಫಲಾನುಭವಿಗಳನ್ನು ಆಯ್ಕೆಮಾಡಿ ಪ್ರಾಧಿಕಾರ ಗುರ್ತಿಸಿ ಆಯಾ ಯೋಜನೆವಾರು ಆರ್ಥಿಕ, ಭೌತಿಕ ಸೌಲಭ್ಯ ನೀಡಲು ಮುಂದಾಗಬೇಕೆಂದು ತಿಳಿಸಿದರು.
ದುರಸ್ಥಿಯಲ್ಲಿರುವ ಶಾಲಾ ಕಟ್ಟಡಗಳು ಮತ್ತು ಸುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಪಿಆರ್‌ಡಿ ಇಂಜಿನಿಯರ್‌ಗಳಿಗೆ ಆದೇಶಿಸಿದ್ದು, ಶಿಕ್ಷಣ ಇಲಾಖೆ ಮತ್ತು ಇಂಜಿನಿಯರಿಂಗ್ ಇಲಾಖೆ ಇಬ್ಬರ ಸಹಕಾರದೊಂದಿಗೆ ಕೂಡಲೇ ಪಟ್ಟಿ ತಯಾರಿಸಿ ನೀಡುವಂತೆ ನಿರ್ದೇಶನ ನೀಡಿರುವುದಾಗಿ ಹೇಳಿದರು.
ತಾಲ್ಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕತೆಗನುಗುಣವಾಗಿ ಮಾಸಿಕ ಕರಡು ಯೋಜನೆಯನ್ನು ತಯಾರು ಮಾಡಲು ಇಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ್‌ಕುಮಾರ್ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಕಾಯಕ ಗ್ರಾಮ ಯೋಜನೆಯಡಿ ಹಿಂದುಳಿದ ಗ್ರಾಮ ಪಂಚಾಯಿತಿಗಳನ್ನು ಗುರ್ತಿಸಿ ಮಾದರಿ ಗ್ರಾಮ ಪಂಚಾಯಿತಿಗಳಾಗಿ ಅಭಿವೃದ್ಧಿಪಡಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಪಶುಗಳಿಗೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಲಾಗಿದ್ದು, ಎಲ್ಲಾ ರೀತಿಯ ರಾಸುಗಳಿಗೆ ಸಮರ್ಪಕ ವ್ಯಾಕ್ಸಿನೇಷನ್ ನೀಡಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.
Selection of 6 Gram Panchayats under Kayaka Gram Yojana
Leave a comment