ಮೂಡಿಗೆರೆ: ಕಡೂರು- ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯ ರೈತ ಭವನದ ಬಳಿ ಕಾರು ಹಾಗೂ ಆಟೊ ಮುಖಾ ಮುಖಿ ಡಿಕ್ಕಿಯಾಗಿ ಆಟೊ ಚಾಲಕ ಮಂಜುನಾಥ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಾನುವಾರ ರಾತ್ರಿ ಹ್ಯಾಂಡ್ಪೋಸ್ಟ್ ಕಡೆಯಿಂದ ಮೂಡಿಗೆರೆ ಪಟ್ಟಣಕ್ಕೆ ತೆರಳುತ್ತಿದ್ದ ಆಟೊಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೊ ನಜ್ಜುಗುಜ್ಜಾಗಿದೆ. ಅದರ ಚಾಲಕ ಮಂಜುನಾಥ್ ರಸ್ತೆಗೆ ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಅಪಘಾತ ದಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಕ್ಕದ ಕಾಫಿ ತೋಟದೊಳಗೆ ನುಗ್ಗಿದೆ. ಇಬ್ಬರು ಮಕ್ಕಳು ಸೇರಿ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮೃತದೇಹವನ್ನು ಎಂಜಿಎಂ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ನಡೆಸಲಾಯಿತು.
ಇಲ್ಲಿರುವ ಹೆದ್ದಾರಿಯು ಸಾವಿನ ಹೆದ್ದಾರಿಯಾಗಿದೆ. ನಿರಂತರವಾಗಿ ಅಪಘಾತಗಳು ಸಂಭವಿಸಿ ಅನೇಕ ಮಂದಿ ಬಲಿಯಾಗಿದ್ದಾರೆ. ಹೆದ್ದಾರಿಯಲ್ಲಿ ವಿಪರೀತ ಗುಂಡಿಯಾಗಿವೆ. ಕನಿಷ್ಠ ಗುಂಡಿಯನ್ನು ಮುಚ್ಚದೆ ಸುಳ್ಳು ಹೇಳುತ್ತಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಅಪಘಾತವಾದಾಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳದಲ್ಲಿ ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.
‘ಕಡೂರು-ಮೂಡಿಗೆರೆ ಹಾಗೂ ತುಮಕೂರು-ಮಂಗಳೂರು ಈ ಎರಡೂ ಹೆದ್ದಾರಿಗಳ ವಿಸ್ತರಣೆಗೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲೆ ಕಾಮಗಾರಿ ಆರಂಭವಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ.
ಇದುವರೆಗೂ ಕಾಮಗಾರಿಯ ಸಿದ್ಧತೆ ಕೂಡ ನಡೆದಿಲ್ಲ. ಹೆದ್ದಾರಿಯುದ್ದಕ್ಕೂ ಗುಂಡಿಯಾಗಿ ವಾಹನಗಳು ಸಂಚರಿಸುವಂತಿಲ್ಲ. ಮಳೆ ನೀರು ಹೆದ್ದಾರಿಯಲ್ಲಿ ಸಂಗ್ರಹಗೊಂಡು ಆಗಾಗ ಅಪಘಾತಗಳು ಸಂಭವಿಸುತ್ತವೆ. ಈಗಾಗಲೇ ಅಪಘಾತದಿಂದ ಹಲವಾರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಅಪಘಾತದ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರದ ಅಧಿಕಾರಿಗಳು ಹೊತ್ತುಕೊಳ್ಳಬೇಕು. ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು’ ಎಂದು ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಎಲ್.ಬಿ. ರಮೇಶ್ ಒತ್ತಾಯಿಸಿದರು.
Auto head-on collision – driver Manjunath dies on the spot
Leave a comment