ಚಿಕ್ಕಮಗಳೂರು: ಕಂದಾಯ ಭೂಮಿಯನ್ನು ಡೀಮ್ಡ್, ೪(೧) ಅಧಿಸೂಚನೆಯಡಿ ಸೇರಿಸಿರುವ ಕಾರಣ ಅನೇಕ ಸಣ್ಣಬೆಳೆಗಾರರು ಬೀದಿಗೆ ಬೀಳಲಿದ್ದು, ಇದರ ವಿರುದ್ಧ ಜಿಲ್ಲೆಯಾದ್ಯಂತ ಪ್ರಬಲ ಹೋರಾಟ ರೂಪಿಸಲಿದ್ದೇವೆ ಎಂದು ಭೂಮಿ, ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಪಿ.ಕುಮಾಸ್ವಾಮಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸದ್ಯಕ್ಕೆ ಸಮಿತಿಯಲ್ಲಿ ೨೫ ಮಂದಿ ಇರುವ ಜಿಲ್ಲಾ ಮಟ್ಟದ ಹೋರಾಟ ಸಮಿತಿ ರಚಿಸಿದ್ದು ಮುಂದೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಮಿತಿ ಮಾಡಿ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿದ್ದ ಕಂದಾಯ ಭೂಮಿಯನ್ನು ಡೀಮ್ಡ್ ಮತ್ತು ೪(೧) ಅಸೂಚನೆಯಡಿ ಗುರುತಿಸಿದ್ದು ಆ ಭೂಮಿಯಲ್ಲಿ ಅದಾಗಲೇ ಸಹಸ್ರಾರು ಮಂದಿ ಬಡವರು ಅಲ್ಪಸ್ವಲ್ಪ ಭೂಮಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಶಾಸಕನಾದಾಗಿನಿಂದ ಒತ್ತಡ ತರುತ್ತಿದ್ದು ಅದರ ಫಲವಾಗಿ ಎಫ್‌ಎಸ್‌ಒ ನೇಮಕವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆದರೆ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಇಂದು ಸಹಸ್ರಾರು ಮಂದಿ ಬಡವರು ಬೀದಿಗೆ ಬೀಳಲಿದ್ದಾರೆ ಎಂದ ಅವರು, ಹೀಗಾಗಿ ಅವರ ಭೂಮಿಯನ್ನು ಉಳಿಸುವುದು ಹಾಗೂ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು ನಮ್ಮ ಹೋರಾಟ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದರು.
ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ, ಹೋರಾಟ ಸಮಿತಿ ಉಪಾಧ್ಯಕ್ಷರಾಗಿ- ನವರಾಜ್, ಸತೀಶ್, ನಾಗೇಶ್, ದಿವಾಕರ, ಮಹೇಶ್, ಬಸವಯ್ಯ, ಪ್ರಧಾನ ಕಾರ್ಯದರ್ಶಿ-ಲಕ್ಷ್ಮಣ ಹುಣಸೇಮಕ್ಕಿ, ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಮಹೇಶ್, ಕೃಷ್ಣಪ್ರಸಾದ್, ಸುಂದರ್, ಖಜಾಂಚಿಯಾಗಿ ದುರ್ಗೇಶ್ ನೇಮಕವಾಗಿದ್ದು, ಆವತಿ ಹೋಬಳಿ ಅಧ್ಯಕ್ಷರಾಗಿ ರವಿ, ಅಂಬಳೆ-ಹುಚ್ಚಯ್ಯ, ಆಲ್ದೂರು ಯೋಗೇಶ್, ವಸ್ತಾರೆ -ಪುಟ್ಟರಾಜು, ಮಂಜು ಮತ್ತಿತರರು ಆಯ್ಕೆಯಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹುಣಸೇಮಕ್ಕಿ ಲಕ್ಷ್ಮಣ, ಮಹೇಶ್, ಹುಚ್ಚಯ್ಯ ಉಪಸ್ಥಿತರಿದ್ದರು.
Formation of a struggle committee for land acquisition
Leave a comment