ಚಿಕ್ಕಮಗಳೂರು : ಮೂಡಿಗೆರೆ ಪಟ್ಟಣ ಸಮೀಪದ ಮುತ್ತಿಗೆಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಕಾಡಾನೆ ದಾಳಿಯಲ್ಲಿ ಸ್ಥಳೀಯ ವ್ಯಕ್ತಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ.
63 ವರ್ಷದ ಫಿಲಿಪ್ ಎಂಬ ವ್ಯಕ್ತಿ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡಿದ್ದಾರೆ. ಮಧ್ಯ ರಾತ್ರಿ ವೇಳೆ ಮನೆಯ ಸಮೀಪ ನಾಯಿ ಬೊಗಳಿದಾಗ ಮನೆ ಸಮೀಪ ಏನೋ ಶಬ್ದವಾಗುತ್ತಿರುವುದನ್ನು ಗಮನಿಸಿ ಜಾನುವಾರುಗಳು ಬಂದಿರಬಹುದು ಎಂದು ಮನೆಯ ಹೊರಗೆ ಬಂದಿದ್ದಾರೆ.
ಮನೆಯಿಂದ ಹೊರಬಂದ ವೇಳೆ ಮನೆಯ ಸಮೀಪವೆ ಬಂದಿದ್ದ ಕಾಡಾನೆ ಏಕಾಏಕಿ ಫಿಲಿಪ್ ಅವರ ಮೇಲೆ ದಾಳಿ ನಡೆಸಿದೆ. ಕಾಡಾನೆ ಸೊಂಡಿಲಿನಿಂದ ಫಿಲಿಪ್ ಅವರನ್ನು ತೆಗೆದು ಎಸೆದಿದೆ. ಆನೆ ದಾಳಿಯಿಂದ ಕಾಲು, ಎದೆ ಹಾಗೂ ಕೈಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಿಲಿಪ್ ಕ್ಯಾಸ್ಟೋಲಿನಾ ಅವರು ಮುತ್ತಿಗೆಪುರ ನಿವಾಸಿಯಾಗಿದ್ದು, ಟ್ರಾಕ್ಟರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ತನ್ನ ಪತ್ನಿ ಹಾಗೂ ಮಗನೊಂದಿಗೆ ವಾಸವಾಗಿದ್ದಾರೆ. ಇದೀಗ ಅವರು ತೀವ್ರ ಗಾಯಗೊಂಡಿದ್ದು ಮುಂದಿನ ದಿನಗಳಲ್ಲಿ ದುಡಿದು ತಿನ್ನುವುದಕ್ಕೆ ಕಷ್ಟವಾಗಿದೆ. ಆನೆ ದಾಳಿಯಿಂದ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಗ್ರಾಮದ ಕಾಫಿ ತೋಟಗಳಲ್ಲಿ ಕಳೆದ ಕೆಲವು ವಾರಗಳಿಂದ ಸುಮಾರು 35 ಕಾಡಾನೆಗಳು ವಾಸ್ತವ್ಯ ಹೂಡಿದ್ದು, ಅವು ನಿರಂತರವಾಗಿ ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ತಾಲ್ಲೂಕಿನ ಮಾಕೋನಹಳ್ಳಿ, ಕಾರಬೈಲ್, ದುಂಡುಗ, ಹಳಸೆ, ಮುತ್ತಿಗೆಪುರ ಗ್ರಾಮಗಳ ಸುತ್ತಾ ಸಂಚರಿಸುತ್ತಾ ತೀವ್ರ ಉಪಟಳ ನೀಡುತ್ತಿವೆ. ಜನರ ನೋವುಗಳನ್ನು ಕೇಳುವವರು ಇಲ್ಲದಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ, ಮಧ್ಯರಾತ್ರಿ ಹೊತ್ತಿಗೆ ಮೂಡಿಗೆರೆ ಅರಣ್ಯ ಅಧಿಕಾರಿ ಕಾವ್ಯ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
Man seriously injured in wild elephant attack in Muttigepura village
Leave a comment