ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಗಾಳಿ, ಮಳೆಗೆ ದತ್ತಪೀಠದ ಮಾರ್ಗದ ಕವಿಕಲ್ ಗಂಡಿ ಬಳಿ ನಿಯಂತ್ರಣ ತಪ್ಪಿ ರಸ್ತೆಯ ತಿರುವಿನಲ್ಲಿ ಪ್ರವಾಸಿ ಕಾರೊಂದು ಪಲ್ಟಿಯಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರಿನಲ್ಲಿದ್ದ ಐವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಪಲ್ಟಿ ಹೊಡೆದ ಪಕ್ಕದಲ್ಲಿ ಪ್ರಪಾತ ಇರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ. ಮಲೆನಾಡಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಮಲೆನಾಡಿನಲ್ಲಿ ಸಂಚರಿಸುವ ಸ್ಥಳೀಯರು ಹಾಗೂ ಪ್ರವಾಸಿಗರು ತಿರುವಿನಲ್ಲಿ ವಾಹನಗಳನ್ನು ನಿಧಾನವಾಗಿ ಚಲಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
Leave a comment