ಚಿಕ್ಕಮಗಳೂರು: ಹೈಕೋರ್ಟ್ ಆದೇಶವನ್ನು ಪಾಲಿಸದೆ ಒತ್ತುವರಿದಾರರಿಗೆ ಹಿಂಬರಹ ನೀಡಿರುವ ಕಡೂರು ತಹಶೀಲ್ದಾರ್ ಪೂರ್ಣಿಮಾ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ. ಮಹೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಕಡೂರು ತಾಲ್ಲೂಕು ಬಾಣೂರು ಗ್ರಾಮದ ಸರ್ವೆ ನಂ ೧೩೫/೭ ರಲ್ಲಿ ಎಸ್. ಬಸವರಾಜಪ್ಪ ಎಂಬುವವರು ಹಳ್ಳವನ್ನು ಮುಚ್ಚಿ ೪ ಗುಂಟೆ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ನ್ಯಾಯಾಲಯವು ೬ ವಾರಗಳ ಒಳಗೆ ತೆರವುಗೊಳಿಸುವಂತೆ ಅದೇಶ ನೀಡಿದ್ದರೂ ನಿಗಧಿತ ಗಡುವಿನೊಳಗೆ ಒತ್ತುವರಿ ತೆರವುಗೊಳಿಸಲು ಕಡೂರು ತಹಶೀಲ್ದಾರ್ ಮುಂದಾಗಿಲ್ಲ ಎಂದು ದೂರಿದರು.
ಕಡೂರು ತಹಶೀಲ್ದಾರ್ರು ಒತ್ತುವರಿದಾರರೊಂದಿಗೆ ಶಾಮೀಲಾಗಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಸೋಮಶೇಖರಪ್ಪ ರೈತ ಸಂಘಟನೆಗೆ ಸಹಾಯ ಕೋರಿದ ಹಿನ್ನೆಲೆಯಲ್ಲಿ ರೈತ ಸಂಘ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ಪರಿಣಾಮ ಮೇ.೨೬ ರಂದು ಸ್ಥಳ ಪರಿಶೀಲಿಸಿ ಭೂಮಾಪಕರಿಂದ ಒತ್ತುವರಿಯಾಗಿರುವ ೪ ಗುಂಟೆ ಜಾಗವನ್ನು ಗುರ್ತಿಸಿದ್ದಾರೆಂದು ತಿಳಿಸಿದರು.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ತಹಶೀಲ್ದಾರ್ರನ್ನು ಕೂಡಲೇ ಅಮಾನತ್ತು ಮಾಡಿ ಕಾನೂನು ಕ್ರಮ ಕೈಗೊಂಡು ದೂರುದಾರರು ಮಾಡಿರುವ ಖರ್ಚುವೆಚ್ಚವನ್ನು ದಂಡದ ರೂಪದಲ್ಲಿ ಬರಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘಟನೆ ರೈತರ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತದೆಯೇ ವಿನಹಾಃ ಒತ್ತುವರಿದಾರರು ಆರೋಪಿಸಿರುವಂತೆ ಕೆಲಸ ಮಾಡುತ್ತಿಲ್ಲ, ನ್ಯಾಯಾಲಯ ಅದೇಶ ನೀಡಿರುವ ಹಳ್ಳದ ಹರಿವಿನ ೧೬.೫ ಅಡಿ ಅಗಲವನ್ನು ತುರ್ತಾಗಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ವೈ.ಸಿ. ಸುನಿಲ್ ಕುಮಾರ್, ಮುಖಂಡರಾದ ಆನಂದ್, ಮಲ್ಲುಂಡಪ್ಪ, ಲೋಕೇಶ್, ರಾಮೇಗೌಡ, ಅರುಣಾಕ್ಷಿ, ದೂರುದಾರರಾದ ಸೋಮಶೇಖರ್. ಬಿ.ಎಸ್ ಶಾರದಮ್ಮ, ಮಮತ, ಹಾಲಮ್ಮ ಉಪಸ್ಥಿತರಿದ್ದರು.
Farmers’ association demands suspension of Kadur Tahsildar
Leave a comment