ಚಿಕ್ಕಮಗಳೂರು: ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಶ್ರೀ ಸಂತ ಸೇವಾಲಾಲ್ ಅವರ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಬಂಜಾರ ಸಂಘದಿಂದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಸಂತ ಶ್ರೀ ಸೇವಾಲಾಲ್ ಅವರ ೨೮೭ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸಮಾನತೆ, ಶೋಷಣೆ ಮುಕ್ತ ಮಾಡಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮ ಸಮಾಜ ನಿರ್ಮಿಸಬೇಕು ಎಂಬ ಕಾರಣಕ್ಕೆ ೧೨ನೇ ಶತಮಾನದಲ್ಲಿ ಬಸವಣ್ಣ, ೧೭ನೇ ಶತಮಾನದಲ್ಲಿ ಶ್ರೀ ಸಂತ ಸೇವಾಲಾಲ್, ೨೧ನೇ ಶತಮಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು ಮತ್ತಿತರೆ ಮಹನೀಯರು ಸಮಾಜ ಸುಧಾರಣೆಗೆ ಹೋರಾಟ ಮಾಡಿದ್ದಾರೆ. ಸತ್ಯ, ಅಹಿಂಸೆ ಪಾಲನೆ ಸೇವಾಲಾಲರ ಧ್ಯೇಯವಾಗಿತ್ತು ಎಂದು ಹೇಳಿದರು.
ಶಾಸಕ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂತ ಸೇವಾಲಾಲರು ಬದುಕಿದ್ದಾಗ ಮಾಡಿದ್ದ ಸಮಾಜಮುಖಿ ಕಾರ್ಯಗಳಿಂದ ಸಮಾಜಕ್ಕೊಂದು ಆತ್ಮಶಕ್ತಿಯ ಜಾಗೃತಿ ಮೂಡಿದೆ. ಶ್ರೀಮಂತಿಕೆಯಿಂದಿದ್ದ ಬಂಜಾರ ಸಮಾಜ ಕಾಲದ ಪರಿಸ್ಥಿತಿಗೆ ಸಿಲುಕಿ ಇಂದು ನಿಕೃಷ್ಟ ಸ್ಥಿತಿಯಲ್ಲಿದೆ. ಲಮಾಣಿ ಭಾಷೆ ಮತ್ತು ಸಂಸ್ಕೃತಿ ಉಳಿಸಲು ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಬಂಜಾರ ಅಕಾಡೆಮಿ ಸ್ಥಾಪನೆ ಮಾಡಿದ್ದಾಗಿ ಹೇಳಿದರು.
ಉಪನ್ಯಾಸಕಿ ಮೀನಾಕ್ಷಿ ಬಾಯಿ ಉಪನ್ಯಾಸ ನೀಡಿ, ೧೭೪೯ರಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲರು ಜನಿಸುವ ಮೂಲಕ ಮಾನವೀಯ ಮೌಲ್ಯಗಳ ಪುನರ್ ಜನ್ಮವಾದಂತಾಯಿತು. ಬಂಜಾರ ಸಮುದಾಯದ ಆತ್ಮಗೌರವದ ಉದಯವಾದಂತಾಯಿತು. ಶಿಕ್ಷಣದಿಂದ ವಂಚಿತರಾಗಿ ಶೋಷಣೆಗೆ ಒಳಗಾಗಿದ್ದ ಬಂಜಾರ ಸಮಾಜಕ್ಕೆ ದಿಕ್ಸೂಚಿಯಾದವರೇ ಸಂತ ಸೇವಲಾಲರು ಎಂದು ಹೇಳಿದರು.
ಬ್ರಿಟೀಷರು ನಮ್ಮ ವಿರುದ್ಧ ಗಿರಿಜನ ಅಪರಾಧ ದಂಡ ಸಂಹಿತೆ ತಂದು ನಮ್ಮನ್ನು ಶೋಷಿಸಿದರು. ನಂತರ ಮೈಸೂರು ಮಹಾರಾಜರ ಕಾಲದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕರಿಸಿದರು ಎಂದು ಹೇಳಿದರು.
ಬಂಜಾರ ಸಮಾಜದ ಮುಖಂಡ ರಾಮನಾಯ್ಕ ಮಾತನಾಡಿದರು. ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ ರವಿನಾಯಕ, ಉಪತಹಸೀಲ್ದಾರ್ ಪ್ರಸನ್ನ, ಬಂಜಾರ ಸಂಘದ ಮುಖಂಡರಾದ ಲಾಲ್ಸಿಂಗ್, ಆನಂದನಾಯ್ಕ ಮತ್ತಿತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಸ್ವಾಗತಿಸಿದರು.
Sri Sant Sevalal’s principles and ideals guide
Leave a comment