ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಭೌತಿಕ ಸರ್ವೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಭಿನಂದಿಸಿದೆ. ಆದರೆ, ಈ ಪ್ರಕ್ರಿಯೆಯನ್ನು ವಿಳಂಬ ಮಾಡದೆ ತಕ್ಷಣ ಆರಂಭಿಸಲು ಸರ್ಕಾರ ನಿರಂತರ ಒತ್ತಡ ಹೇರಬೇಕು ಎಂದು ಸಮಿತಿಯ ಅಧ್ಯಕ್ಷ ಎಸ್. ವಿಜಯಕುಮಾರ್ ಆಗ್ರಹಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಹಾಗೂ ಇನಾಂ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ರೈತರ ಭೂಮಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಒಟ್ಟು 3.40 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶವಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 59,200 ಹೆಕ್ಟೇರ್ ಪ್ರದೇಶವಿದೆ. ಈ ಪ್ರದೇಶದಲ್ಲಿ ಜಂಟಿ ಸರ್ವೆ ನಡೆಸಿ, ರೈತರ ಭೂಮಿ, ಶಾಲೆಗಳು, ಆಟದ ಮೈದಾನಗಳು, ರಸ್ತೆಗಳು ಹಾಗೂ ಇತರ ಸಾರ್ವಜನಿಕ ಅಗತ್ಯಗಳಿಗಾಗಿ ಬಳಕೆಯಾಗುತ್ತಿರುವ ಪ್ರದೇಶಗಳನ್ನು ಪ್ರತ್ಯೇಕಿಸಿ ನಕ್ಷೆ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೂ ಜಿಲ್ಲಾಡಳಿತ ಸರ್ವೆ ಕಾರ್ಯ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ರೈತರಿಗೆ ಹಕ್ಕುಪತ್ರ ವಿತರಣೆ, 94ಸಿ ಅಡಿಯಲ್ಲಿ ಮನೆಗಳ ಹಕ್ಕುಪತ್ರ ನೀಡುವುದು ಹಾಗೂ ವಸತಿರಹಿತರಿಗೆ ನಿವೇಶನ ಹಂಚಿಕೆ ಸೇರಿದಂತೆ ಹಲವು ಕಾರ್ಯಗಳು ಬಾಕಿ ಉಳಿದಿವೆ. ಜಿಲ್ಲಾಧಿಕಾರಿಗಳು ಕೂಡಲೇ ಕಂದಾಯ, ಅರಣ್ಯ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಹೋರಾಟಗಾರರ ಸಭೆ ಕರೆದು, ಸರ್ವೆ ಕಾರ್ಯ ಪೂರ್ಣಗೊಳಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿರುವ ಡೀಮ್ಡ್ ಫಾರೆಸ್ಟ್ ಪ್ರದೇಶದ ಜಂಟಿ ಸರ್ವೆ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಈ ಭಾಗದ ರೈತರ ಭೂಮಿ ಹಾಗೂ ಗ್ರಾಮಗಳ ಅಗತ್ಯಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಜಯಕುಮಾರ್ ಹೇಳಿದರು.
ಈ ಪ್ರದೇಶದ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೆಯನ್ನು ಅಂತಿಮಗೊಳಿಸದೆ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ನೂರಾರು ರೈತರ ಬದುಕಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಮೊದಲು ರೈತರ ಭೂಮಿ ಹಾಗೂ ಗ್ರಾಮಗಳ ಅಗತ್ಯಗಳನ್ನು ಗುರುತಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಇನಾಂ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದ ಮತ್ತು ಈಗ ಆಡಳಿತ ನಡೆಸುತ್ತಿರುವ ಸರ್ಕಾರಗಳು ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಇನಾಂ ಭೂಮಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿವೆ ಎಂದು ದೂರಿದರು.
ಸ್ಥಳೀಯ ಜನಪ್ರತಿನಿಧಿಗಳು ಕಂದಾಯ ಸಚಿವರ ಮೇಲೆ ಒತ್ತಡ ಹೇರಿ, ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸುಮಾರು 238 ಅರಣ್ಯ ಬ್ಲಾಕ್ಗಳನ್ನು ಮೀಸಲು ಅರಣ್ಯಕ್ಕೆ ಸಂಬಂಧಿಸಿದ ಸೆಕ್ಷನ್ 4(1) ಪ್ರಸ್ತಾವನೆಯಡಿ ಘೋಷಿಸಲಾಗಿದೆ. ಇವುಗಳಲ್ಲಿ ಹಲವು ಬ್ಲಾಕ್ಗಳು 1942ಕ್ಕೂ ಮೊದಲು ಘೋಷಣೆಯಾಗಿದ್ದರೂ, ಈವರೆಗೆ ಸೆಕ್ಷನ್ 17ರ ಅಡಿ ಮೀಸಲು ಅರಣ್ಯದ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ ಎಂದು ಸಮಿತಿ ತಿಳಿಸಿದೆ.
1987ರಿಂದ ಇತ್ತೀಚಿನ ವರ್ಷಗಳವರೆಗೆ ಘೋಷಣೆಯಾಗಿರುವ ಹಲವು ಅರಣ್ಯ ಬ್ಲಾಕ್ಗಳ ಪ್ರಕರಣಗಳೂ ಬಾಕಿ ಉಳಿದಿವೆ. ಈಗ ಇವುಗಳ ಸೆಕ್ಷನ್ 17ರ ಅಂತಿಮ ಅಧಿಸೂಚನೆಗಾಗಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳ (ಎಫ್ಎಸ್ಒ) ಮೂಲಕ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 80ರಿಂದ 90 ವರ್ಷಗಳಷ್ಟು ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ, ದಶಕಗಳಿಂದ ಭೂಮಿ ಸಾಗುವಳಿ ಮಾಡಿಕೊಂಡು ಬದುಕುತ್ತಿರುವ ರೈತರ ಹಿತಾಸಕ್ತಿಯನ್ನು ಗಮನಿಸಬೇಕು ಎಂದು ಹೇಳಿದರು.
ಈ ಪ್ರದೇಶಗಳಲ್ಲಿ ಸಾವಿರಾರು ರೈತರು ಸುಮಾರು 50 ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿದ್ದು, ಅನೇಕ ಗ್ರಾಮಗಳಲ್ಲಿ ರಸ್ತೆಗಳು, ಸರ್ಕಾರಿ ಕಟ್ಟಡಗಳು, ಅಂಗನವಾಡಿಗಳು ಮತ್ತು ಶಾಲೆಗಳು ನಿರ್ಮಾಣಗೊಂಡಿವೆ. ಹೀಗಾಗಿ, ಜನವಸತಿ ಹಾಗೂ ರೈತರ ಸಾಗುವಳಿ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಗಣಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.
ಚುರ್ಚಿಗುಡ್ಡ, ಅರಿಶಿನಗುಪ್ಪೆ, ಅಲ್ಲಂಪುರ, ಪಂಡರವಳ್ಳಿ ಮತ್ತು ಬ್ರಹ್ಮಸಮುದ್ರ ಬ್ಲಾಕ್ಗಳ ಸೆಕ್ಷನ್ 17ರ ಅಂತಿಮ ಪ್ರಕ್ರಿಯೆ ಪೂರ್ಣಗೊಳಿಸಿ, ಸಂಬಂಧಿತ ಕಡತಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಇವುಗಳಿಗೆ ಅಂತಿಮ ಅನುಮೋದನೆ ನೀಡುವುದರ ಜೊತೆಗೆ ಇತರ ಬ್ಲಾಕ್ಗಳ ಕಡತಗಳನ್ನು ಸರ್ಕಾರಕ್ಕೆ ಕಳುಹಿಸಿ ಇತ್ಯರ್ಥಪಡಿಸಬೇಕು. ಬಾಕಿ ಇರುವ ಸೆಕ್ಷನ್ 4(1) ಪ್ರಕರಣಗಳನ್ನೂ ತಕ್ಷಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಸೆಕ್ಷನ್ 4(1) ಪ್ರಕರಣಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನು ನೇಮಿಸಿ ಅಥವಾ ನವೀಕರಿಸಿ ಮೂರು ತಿಂಗಳು ಕಳೆದಿದ್ದರೂ, ಅರಣ್ಯ ಇಲಾಖೆಯಿಂದ ಅವರಿಗೆ ಮೀಸಲು ಅರಣ್ಯ ಪ್ರಸ್ತಾವನೆಗೆ ಸಂಬಂಧಿಸಿದ ಕಡತಗಳನ್ನು ಹಸ್ತಾಂತರಿಸಿಲ್ಲ ಎಂದು ಸಮಿತಿ ಆರೋಪಿಸಿದೆ.
ಇದರಿಂದ ನೂರಾರು ಬಾಕಿ ಪ್ರಕರಣಗಳಲ್ಲಿರುವ ಸಾವಿರಾರು ರೈತರ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಆದ್ದರಿಂದ ಸಂಬಂಧಪಟ್ಟ ಕಡತಗಳನ್ನು ಕೂಡಲೇ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಹಸ್ತಾಂತರಿಸಿ, ಮುಂದಿನ ಕಾನೂನು ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಬೇಕು ಎಂದು ವಿಜಯಕುಮಾರ್ ಒತ್ತಾಯಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಕಾಮೇನಹಳ್ಳಿ ಅರಣ್ಯ ಪ್ರದೇಶವನ್ನು 1942ರಲ್ಲಿ ಘೋಷಿಸಲಾಗಿದ್ದು, 1956ರಲ್ಲಿ ಸೆಕ್ಷನ್ 17ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಮೀಸಲು ಅರಣ್ಯವನ್ನಾಗಿ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಈ ಪ್ರದೇಶದಲ್ಲಿ 9,358.13 ಎಕರೆ ಅರಣ್ಯ ಪ್ರದೇಶವಿದ್ದು, 420 ಎಕರೆ ಅಮೃತಮಹಲ್ ಪ್ರದೇಶವೂ ಇದೆ. 1963-64ರಲ್ಲಿ ಅಯ್ಯನಕೆರೆಯಿಂದ ಸಾಗುವಳಿದಾರರಿಗಾಗಿ 240 ಎಕರೆ ಭೂಮಿಯನ್ನು ಕಂದಾಯ ಇಲಾಖೆಗೆ ಪಡೆಯಲಾಗಿದೆ ಎಂದು ವಿವರಿಸಿದರು.
ಪಹಣಿಯಲ್ಲಿರುವ ವಿವರಗಳಿಗೆ ಅನುಗುಣವಾಗಿ 9,358.13 ಎಕರೆ ಅರಣ್ಯ ಪ್ರದೇಶದ ಸರ್ವೆ ನಡೆಸಿ ಗಡಿ ಗುರುತಿಸಬೇಕು. ಅರಣ್ಯ ವ್ಯಾಪ್ತಿಯಿಂದ ಹೊರಗಿರುವ, ರೈತರು ಸಾಗುವಳಿ ಮಾಡುತ್ತಿರುವ ಸುಮಾರು 660 ಎಕರೆ ಕಂದಾಯ ಭೂಮಿಯನ್ನು ಪ್ರತ್ಯೇಕಿಸಲು ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ರೈತರು ದಶಕಗಳಿಂದ ಎದುರಿಸುತ್ತಿರುವ ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಹಾಗೂ ಇನಾಂ ಭೂಮಿ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ರೈತರ ಹಕ್ಕು ಮತ್ತು ಬದುಕಿನ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿತು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಕೆ.ಕೆ. ರಘು, ಪ್ರಕಾಶ್, ರಾಜಭಗೋರು, ಚಂದು ಪ್ರದಾವ್, ವಾಸು, ರವಿಕುಮಾರ್, ಕುಮಾರ್, ನಿವೃತ್ತ ಶಿಕ್ಷಕ ಚಂದ್ರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
Request to the Central Government to conduct a physical survey
Leave a comment