ಚಿಕ್ಕಮಗಳೂರು: ಸಂವಿಧಾನ ಮತ್ತು ಕಾನೂನಿನಿಂದ ಮಾತ್ರ ದೇಶದಲ್ಲಿರುವ ಮೇಲು-ಕೀಳು ಹಾಗೂ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಜನರ ಮನಸ್ಥಿತಿ ಬದಲಾಗುವ ತುರ್ತು ಅಗತ್ಯವಿದೆ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ‘ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವತಃ ತಾವು ಅನುಭವಿಸಿದ ನೋವು, ಅವಮಾನಗಳನ್ನು ಮುಂದೆ ಯಾವ ಭಾರತೀಯನೂ ಅನುಭವಿಸಬಾರದು ಎಂಬ ದೂರದೃಷ್ಟಿಯಿಂದ ಜಗತ್ತಿನ ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಅತ್ಯುತ್ತಮ ಮತ್ತು ವಿಶಿಷ್ಟ ಸಂವಿಧಾನವನ್ನು ನೀಡಿದ್ದಾರೆ. ಈ ಸಂವಿಧಾನದ ಆಶಯದಿಂದಾಗಿಯೇ ಒಬ್ಬ ಸಾಮಾನ್ಯ ಅಥವಾ ಅನಕ್ಷರಸ್ಥ ವ್ಯಕ್ತಿಯೂ ಇಂದು ಅಧಿಕಾರದ ಚುಕ್ಕಾಣಿ ಹಿಡಿದು ದೇಶ ಮುನ್ನಡೆಸಲು ಸಾಧ್ಯವಾಗಿದೆ’ ಎಂದರು.
ಭಾರತವು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ, ಸಂವಿಧಾನದ ಆಶಯಗಳಿಗೆ ತಕ್ಕಂತೆ ಕಾನೂನುಗಳನ್ನು ಯಥಾವತ್ತಾಗಿ ಜಾರಿಗೊಳಿಸುವಲ್ಲಿ ನಾವು ಇನ್ನೂ ಸ್ವಲ್ಪ ಹಿಂದಿದ್ದೇವೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ದೇಶದಲ್ಲಿ ಯಾವುದೇ ರೀತಿಯ ಅಸ್ಪೃಶ್ಯತೆ ಮತ್ತು ತಾರತಮ್ಯ ಉಳಿಯುವುದಿಲ್ಲ. ಇಂದಿಗೂ ಸಮಾಜದಲ್ಲಿ ಮೇಲು-ಕೀಳು ಎಂಬ ಮನೋಭಾವ ಕಂಡುಬರುತ್ತಿರುವುದು ವಿಷಾದನೀಯ’ ಎಂದು ಹೇಳಿದರು.
‘ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆದ ಯುವ ಸಂಸತ್ ಕಾರ್ಯಕ್ರಮದಲ್ಲಿ ಯುವಜನರು ಅತ್ಯುತ್ತಮವಾಗಿ ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಬಗ್ಗೆ ಕಾಳಜಿ ಇರುವವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಾನಂದಸ್ವಾಮಿ ಮಾತನಾಡಿ, ‘ಭಾರತೀಯ ಸಂವಿಧಾನವು ನಮಗೆ ಸಾಕಷ್ಟು ಹಕ್ಕುಗಳನ್ನು ನೀಡಿದೆ. ಆ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುವ ಜೊತೆಗೆ, ಇತರರಿಗೆ ಗೌರವ ನೀಡುವ ಮತ್ತು ಸಂವಿಧಾನದ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು’ ಎಂದರು.
‘ಸಂವಿಧಾನದ ಪೀಠಿಕೆಯನ್ನು ಓದುವುದಷ್ಟೇ ಅಲ್ಲ, ಅದರ ಆಶಯಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ದಿನಾಚರಣೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ. ನಾನು ಎಂದಿಗೂ ಯಾರನ್ನೂ ಏಕವಚನದಲ್ಲಿ ಮಾತನಾಡಿಸಿಲ್ಲ, ಮುಂದೆಯೂ ಮಾತನಾಡಿಸುವುದಿಲ್ಲ. ನಾವೆಲ್ಲರೂ ಪರಸ್ಪರ ಗೌರವಿಸುವಂತಹ ಮಾತುಗಳನ್ನಾಡಿದರೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಹಾಗೂ ನಮಗೆಲ್ಲರಿಗೂ ಗೌರವ ಸಲ್ಲಿಸಿದಂತಾಗುತ್ತದೆ’ ಎಂದರು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ‘ಸಂವಿಧಾನವು ಕೇವಲ ಒಂದು ಕಾನೂನಿನ ದಾಖಲೆಯಲ್ಲ; ಅದು ದೇಶದ ಆತ್ಮ ಮತ್ತು ಮುನ್ನೋಟವಾಗಿದೆ. ‘ಭಾರತದ ಜನಗಳಾದ ನಾವು…’ ಎಂಬ ಪೀಠಿಕೆಯ ಮೊದಲ ಸಾಲೇ ಸಂವಿಧಾನದ ನಿಜವಾದ ಶಕ್ತಿಯ ಮೂಲವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಪ್ರತಿಯೊಂದು ಯೋಜನೆಯ ಹಿಂದೆಯೂ ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸುವ ಉದ್ದೇಶವಿದೆ. ಅಧಿಕಾರಿಗಳು ಪಾರದರ್ಶಕವಾಗಿ ಮತ್ತು ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಂವಿಧಾನದ ಆಶಯಗಳು ಹಾಗೂ ಮೌಲ್ಯಗಳನ್ನು ನಿಜಾರ್ಥದಲ್ಲಿ ರಕ್ಷಿಸಲು ಸಾಧ್ಯ’ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
‘ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂವಿಧಾನದ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾನವ ಸರಪಳಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಯುವಜನರಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಅರಿವು ಮೂಡಿಸಲು ‘ಯುವ ಸಂಸತ್’ನಂತಹ ವಿನೂತನ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಅರಿತು, ಪಾಲಿಸಬೇಕು’ ಎಂದರು.
ಶಾಸಕ ಹೆಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ; ಬದಲಿಗೆ ನಮ್ಮೆಲ್ಲರ ಆತ್ಮ ಹಾಗೂ ಪ್ರತಿಯೊಬ್ಬ ಭಾರತೀಯ ನಾಗರಿಕನ ಹಕ್ಕುಗಳ ರಕ್ಷಾ ಕವಚವಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯ ಕರಡು ಸಮಿತಿಯು ಸುಮಾರು ಎರಡು ವರ್ಷ ೧೧ ತಿಂಗಳುಗಳ ಕಾಲ ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿ, ೧೯೪೯ರ ನವೆಂಬರ್ ೨೬ರಂದು ಸಂವಿಧಾನವನ್ನು ಸರ್ಕಾರಕ್ಕೆ ಸಮರ್ಪಿಸಿದ ದಿನವಿದು. ಮೊದಲು ಇದನ್ನು ರಾಷ್ಟ್ರೀಯ ಕಾನೂನು ದಿನ ಎಂದು ಕರೆಯಲಾಗುತ್ತಿತ್ತು. ೨೦೧೫ರಿಂದ ಕೇಂದ್ರ ಸರ್ಕಾರ ಇದನ್ನು ’ಸಂವಿಧಾನ ದಿನ’ವನ್ನಾಗಿ ಘೋಷಿಸಿತು ಎಂದು ಸ್ಮರಿಸಿದರು.
ಸಂವಿಧಾನದ ಪೀಠಿಕೆಯಲ್ಲಿ ಹಿಂದೆ ’ಭಾರತದ ಪ್ರಜೆಗಳಾದ ನಾವು’ ಎಂದಿತ್ತು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜರಿಲ್ಲ; ನಾವೆಲ್ಲರೂ ಜನರು. ಹೀಗಾಗಿ ’ಭಾರತದ ಜನರು’ ಎಂದು ಬದಲಿಸಲಾಗಿದೆ. ಸರ್ವಭೌಮ, ಸಮಾಜವಾದಿ, ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲ ಧರ್ಮ, ಜಾತಿ, ಭಾಷೆ, ಸಂಸ್ಕೃತಿಯ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಸಂವಿಧಾನ ಮಾತ್ರ ಸಮಾನ ಅವಕಾಶ ನೀಡಿದೆ ಎಂದರು.
ಚಿಕ್ಕಮಗಳೂರಿನಲ್ಲಿ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದಾರೆ. ತಾಂತ್ರಿಕ ಹಾಗೂ ಕಾನೂನು ತೊಡಕುಗಳಿಂದ ವಿಳಂಬವಾಗಿದ್ದು, ಶೀಘ್ರವೇ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಅಂತಿಮಗೊಳಿಸಲಾಗುವುದು. ಅಲ್ಲದೆ, ಅಂಬೇಡ್ಕರ್ ಭವನದ ಕಾಮಗಾರಿಯನ್ನು ವೀಕ್ಷಿಸಿದ್ದು, ಜನವರಿ ೧ರಂದು ಲೋಕಾರ್ಪಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಂ.ಸಿ ಶಿವಾನಂದ ಸ್ವಾಮಿ. ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೀನಾಕ್ಷಿ ಆರ್ಯ, ದಲಿತ ಸಂಘದ ಮುಖಂಡ ಕೆ.ಟಿ ರಾಧಕೃಷ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
‘People’s mindset must change to eradicate untouchability’
Leave a comment