ಚಿಕ್ಕಮಗಳೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ತೀರ್ಮಾನದಂತೆ ದೇಶದಾದ್ಯಂತ ‘ಸಂಘಟನ್ ಸೃಜನ ಅಭಿಯಾನ’ ನಡೆಸುತ್ತಿದ್ದು, ಜಿಲ್ಲೆಯಲ್ಲೂ ಇಂದಿನಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಮಾಜಿ ಕಾರ್ಯದರ್ಶಿ, ಗುಜರಾತ್ ಉಸ್ತುವಾರಿ ಬಿಶ್ವರಂಜನ್ ಮೊಹಾಂತಿ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಜಿಲ್ಲೆಯ 12 ಬ್ಲಾಕ್ಗಳಿಗೆ ತೆರಳಿ ಪಕ್ಷದ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು, ನಾಮನಿರ್ದೇಶಿತರು, ಹಿರಿಯ ಮುಖಂಡರನ್ನು ಜುಲೈ 26ರಿಂದ ಅ.1ರವರೆಗೆ ಭೇಟಿಯಾಗುತ್ತಿರುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅಪೇಕ್ಷೆಯಂತೆ ಪಕ್ಷದ ತತ್ವ-ಸಿದ್ಧಾಂತದಡಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುವುದು. ಪಕ್ಷಕ್ಕೆ ಹೊಸ ಚೈತನ್ಯ ನೀಡಲು ಸಂಘಟನ್ ಸೃಜನ್ ಅಭಿಯಾನ ಸಹಕಾರಿಯಾಗಲಿದೆ. ಅಹಮದಾಬಾದ್ನಲ್ಲಿ ನಡೆದ ಪಕ್ಷದ ಅಧಿವೇಶದಲ್ಲಿ ಅಭಿಯಾನ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು ಎಂದರು.
ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವವರು ಅರ್ಜಿಯನ್ನು ಪಡೆದು ಭರ್ತಿಮಾಡಬೇಕು. ಈಗಾಗಲೇ ಪಕ್ಷಕ್ಕೆ ನಿರ್ವಹಿಸಿರುವ ಕೆಲಸಗಳನ್ನು ನಮೂದಿಸಬೇಕೆಂದು ತಿಳಿಸಿ, ಈ ಜಿಲ್ಲೆಯಲ್ಲಿ ಸಂಘಟನ್ ಸೃಜನ್ ಅಭಿಯಾನದ ವರದಿಯನ್ನು ಪಕ್ಷದ ವರಿಷ್ಠರಿಗೆ ತಲುಪಿಸಲಾಗುವುದು. ಪಕ್ಷದ ಇತರ ವಿಷಯಗಳ ಕುರಿತು ಚರ್ಚಿಸುವುದಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಂಶುಮಂತ್ ಮಾತನಾಡಿ, ಜುಲೈ 26ರಂದು ಎಐಸಿಸಿ ಮಾಜಿ ಕಾರ್ಯದರ್ಶಿ ಬಿಶ್ವರಂಜನ್ ಮೊಹಾಂತಿ ಅವರು ಮೂಡಿಗೆರೆ, ಅಲ್ಲೂರು, ಕಳಸ ಬ್ಲಾಕ್ ಸಮಿತಿಗೆ ಭೇಟಿ ನೀಡುವರು. 27ರಂದು ಶೃಂಗೇರಿ, ಕೊಪ್ಪ, ನರಸಿಂಹರಾಜಪುರಕ್ಕೆ 28ಕ್ಕೆ ತರೀಕೆರೆ, ಅಜ್ಜಂಪುರಕ್ಕೆ 29ಕ್ಕೆ ಕಡೂರು, ಬೀರೂರು ಬ್ಲಾಕ್ಗೆ 30ರಂದು ಚಿಕ್ಕಮಗಳೂರು, ಸಖರಾಯಪಟ್ಟಣಕ್ಕೆ 31ರಂದು, ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿಗಳನ್ನು ಪ್ರತ್ಯೇಕವಾಗಿ ಭೇಟಿಮಾಡಲಿದ್ದಾರೆ. ಆ.1ರಂದು ಸಮುದಾಯ ಮುಖಂಡರ ಸಭೆ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಮೋಹನ್, ಬಿ.ಎಂ.ಸಂದೀಪ, ರೂಬೆನ್ ಮೊಸಸ್, ಶಿವಾನಂದಸ್ವಾಮಿ, ಮಲ್ಲೇಶ್, ಎಚ್.ಪಿ. ಮಂಜೇಗೌಡ, ಶಾಸಕರಾದ ಎಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ, ಟಿ.ಡಿ.ರಾಜೇಗೌಡ ಭಾಗವಹಿಸಿದ್ದರು.
Organization creation campaign in the district from today
Leave a comment