ಚಿಕ್ಕಮಗಳೂರು: ಮರಗಸಿ ಮಾಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆರಡಿ ಗ್ರಾಮದ ಅಂಬಿಕಾ ಎಸ್ಟೇಟ್‌ನಲ್ಲಿ ನಡೆದಿದೆ. ಮೃತರನ್ನು ಲಿಂಗಪ್ಪ ಎಂದು ಗುರುತಿಸಲಾಗಿದ್ದು, ಇವರು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸುಮಾರು 30 ಅಡಿ ಎತ್ತರದಿಂದ ಕಾಲು ಜಾರಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ತೋಟದ ಮಾಲೀಕ ದಯಾನಂದ ಶೆಟ್ಟಿ ಕೆಲಸದ ವೇಳೆ ಕಾರ್ಮಿಕರಿಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಮತ್ತು ಮರ ಹತ್ತಲು ಬೇಕಾದ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ನೀಡದೆ ಮರಗಸಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಾಲೀಕರ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಮೃತರ ಅಳಿಯ ಪೂರ್ಣೇಶ್ ಅವರು ಅಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲೀಸರು ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕಾರ್ಮಿಕರ ಸುರಕ್ಷತೆಯ ವಿಷಯದಲ್ಲಿ ತೋಟದ ಮಾಲೀಕರು ತೋರುತ್ತಿರುವ ಬೇಜವಾಬ್ದಾರಿತನಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಮೃತರ ಕುಟುಂಬದವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
Maragasi: Worker dies after falling from tree
Leave a comment