ಕಡೂರು: ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲು ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ತಾಲ್ಲೂಕಿನ ಕಲ್ಕೆರೆ ಗ್ರಾಮದ ಕರಿಯಮ್ಮ ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಕಲ್ಕೆರೆ, ಕುಕ್ಕ ಸಮುದ್ರ ಕೆರೆಗೆ ನೀರು ಹರಿಯುವುದು ನಿಶ್ಚಿತ. ಹೊಸ ಸರ್ಕಾರಕ್ಕೆ ನೂರು ದಿನ ತುಂಬುವುದರೊಳಗಾಗಿ ನೀರು ಈ ಕೆರೆಗಳಿಗೆ ಬರುತ್ತದೆಯೆಂಬ ವಿಶ್ವಾಸ ಆಶಾಭಾವನೆ ನನ್ನದಾಗಿದೆ. ಭಧ್ರಾ ಮೇಲ್ದಂಡೆ 32 ಕೆರೆ ತುಂಬಿಸುವುದರಿಂದ ಸಿಂಗಟಗೆರೆ, ಪಂಚನಹಳ್ಳಿ, ಯಗಟಿ ಹೋಬಳಿಗಳಿಗೆ ಅನುಕೂಲವಾಗುತ್ತದೆ. ಮಧಗದ ಕೆರೆಗೆ ಭಧ್ರಾ ಉಪಕಣಿವೆ ಯೋಜನೆಯಡಿ ನೀರು ಹರಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿರುವುದು ಸಮಾಧಾನಕರ. ಆದರೆ ಈ ಕಾಮಗಾರಿಗೂ ಮುನ್ನ ಘೋಷಣೆಯಾದ ಭಧ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಕುಂಠಿತವಾಗಿರುವುದು ಬೇಸರವಾಗಿದೆ. ಈ ಕಾಮಗಾರಿಗೆ ವೇಗ ದೊರಕಿಸುವುದಕ್ಕೆ ಸರ್ಕಾರ ಆಧ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ 102 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಕಡೂರನ್ನು ಆ ಪಟ್ಟಿಯಿಂದ ಕೈಬಿಟ್ಟಿದೆ. ನಮ್ಮ ರೈತರ ಹಕ್ಕೊತ್ತಾಯವಾಗಿ ತಾಲ್ಲೂಕನ್ನು ಬರಪೀಡಿತ ಎಂದು ಫೋಷಣೆ ಮಾಡಬೇಕೆಂಬ ಒತ್ತಾಯ ಮಾಡುವ ಉದ್ದೇಶದಿಂದ ರೈತರೊಡಗೂಡಿ ತಾಲ್ಲೂಕಿನ ಕಲ್ಕೆರೆ ಯಿಂದ ತಾಲೂಕು ಕೇಂದ್ರಕ್ಕೆ ಪಾದಯಾತ್ರೆ ಮಾಡಲಿದ್ದೇನೆ. ಆಗಸ್ಟ್ 28 ರಂದು ಶುಕ್ರವಾರ ಬೆಳಗ್ಗೆ ಕಲ್ಕೆರೆಯಿಂದ ಆರಂಭಿಸಿ, ತಿಮ್ಲಾಪುರ, ಕಳ್ಳಿ ಹೊಸಹಳ್ಳಿ, ಹುರುಕನಹಳ್ಳಿ, ದೊಡ್ಡ ಬಳ್ಳೇಕೆರೆ, ಪಿ.ಕೋಡಿಹಳ್ಳಿ, ಹಿರೇಗರ್ಜೆ,ಗರ್ಜೆ, ಜಿಮಾದಾಪುರ, ಬಿಳುವಾಲ ತಲುಪಿ ಅಲ್ಲಿ ವಾಸ್ತವ್ಯವಿದ್ದು. ಮಾರನೇ ದಿನ ಶನಿವಾರ ಬಿಳುವಾಲದಿಂದ ಹೊರಟು ಎಂ.ಕೋಡಿಹಳ್ಳಿ, ಮಚ್ಚೇರಿ, ಮಲ್ಲೇಶ್ವರ, ಕಡೂರು ತಲುಪಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕಿನ ಬರ ಪರಿಸ್ಥಿತಿ ಅವಲೋಕಿಸಿದ್ದಾರೆ. ಶಾಸಕರೂ ಸಹ ವಸ್ತುಸ್ಥಿತಿ ವಿವರಿಸಿದ್ದಾರೆ. ಆದರೆ ಕ್ಷೇತ್ರದ ಬಗ್ಗೆ ಇರುವ ಅಸ್ಥೆ ಮತ್ತು ಕರ್ತವ್ಯದ ದೃಷ್ಟಿಯಿಂದ ಈ ಪಾದಯಾತ್ರೆ ಮಾಡಲಿದ್ದೇನೆ. ಯಾವುದೇ ರಾಜಕೀಯ ಉದ್ದೇಶವಿಲ್ಲ. ಕ್ಷೇತ್ರದ ರೈತರ ಹಿತದೃಷ್ಟಿಯಿಂದಷ್ಟೆ ಈ ಪಾದಯಾತ್ರೆ ಎಂದು ಸ್ಷಷ್ಠ ಪಡಿಸಿದರು.
ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ ಕಡೂರು ಕ್ಷೇತ್ರದ ರೈತರು ಸಹ ಶಾಸಕ ಆನಂದ್ ರವರಿಗೆ ಚುನಾವಣೆಯಲ್ಲಿ ಮತ ಹಾಕಿರುವುದನ್ನು ಮರೆತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ರೈತರ ಒಳಿಗಾಗಿ ಶ್ರಮಿಸಬೇಕು. ಬರದಿಂದ ನಲುಗುತ್ತಿರುವ ರೈತರು ತೋಟಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ. ಸಮಸ್ಯೆ ಬಹಳಷ್ಟು ಇದ್ದರು ಬರ ಪೀಡಿತ ಪಟ್ಟಿಗೆ ಸೇರಿಸದೆ ಜಿಲ್ಲಾ ಉಸ್ತುವಾರಿ ಸಚಿವರು ಕೈಚೆಲ್ಲಿದ್ದಾರೆ ಎಂದರು.
ಕಡೂರು ಪ್ರಶಾಂತ್ ಮಾತನಾಡಿ ಈ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ. ನಮ್ಮ ನೀರು ನಮ್ಮ ಹಕ್ಕಿಗಾಗಿ ಮಾಜಿ ಶಾಸಕರು ಹೋರಾಟ ಮಾಡುತ್ತಿದ್ದಾರೆ. ತಾಲ್ಲೂಕಿನ ಜನತೆ ಎಚ್ಚೆತ್ತು ಇಂತಹ ಹೋರಾಟದಲ್ಲಿ ಭಾಗವಹಿಸಿದಾಗ ಮಾತ್ರ ನಾವು ಸರ್ಕಾರವನ್ನು ಎಚ್ಚರಿಸಿ ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದಾಗ ಮಾತ್ರ ನಮ್ಮ ರೈತರನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಗಣೇಶ್, ಮಚ್ಚೇರಿ ಮಂಜು, ಗುಜ್ಜೆನಲ್ಲಿ ಶಂಕ್ರಣ್ಣ, ಗುಡ್ಡೆಹಳ್ಳಿ ವಿನಯ್, ಮಂಜುನಾಥ್, ಚೌಳಹಿರಿಯೂರು ಅಶೋಕ್, ವೈ.ಎಸ್.ರವಿಪ್ರಕಾಶ್, ಹಾಲುಸಿದ್ದಪ್ಪ, ಯತೀಶ್ , ಮಲ್ಲಿಕಾರ್ಜುನ್ ವೈ.ಎಸ್.ವಿ ಅಭಿಮಾನ ಬಳಗದ ನೂರಾರು ಯುವಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು
Kadur taluk started a walk demanding drought declaration
Leave a comment