ಬೀರೂರು : ‘ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಅಸಮಾನತೆ ತೊಡೆದುಹಾಕಲು ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೀರೂರು ಪಟ್ಟಣದ ಕೆಎಲ್ಕೆ ಮೈದಾನದಲ್ಲಿ ಬೀರೂರು ಕುರುಬರ ಸಂಘದ ವತಿಯಿಂದ ಪ್ರತಿಷ್ಠಾಪಿಸಿರುವ ದಾಸಶ್ರೇಷ್ಠ ಕನಕದಾಸರು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆಗಳನ್ನು ಶನಿವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ಅಸಮಾನತೆ ನಿವಾರಣೆಗೆ ಶಿಕ್ಷಣವೇ ಪ್ರಮುಖ ಅಸ್ತ್ರ. ಹಿಂದುಳಿದ ವರ್ಗಗಳ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ಸಮಾನತೆ ಮತ್ತು ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
‘ಕೇಂದ್ರದ ಮೋದಿ ಸರ್ಕಾರ ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಹಾಗೂ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿ, ಅಚ್ಛೇ ದಿನ್ ತರುವುದಾಗಿ ಹೇಳಿತ್ತು. 12 ವರ್ಷಗಳಲ್ಲಿ ಏನು ಮಾಡಿದೆ? ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಬಿಜೆಪಿಯ ಕೊಡುಗೆ ಏನು’ ಎಂದು ಪ್ರಶ್ನಿಸಿದರು.
ಬೀರೂರಿನಲ್ಲಿ ನಿರ್ಮಿಸಿರುವ ಕನಕದಾಸರು ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಕೇವಲ ಪ್ರತಿಮೆಗಳಾಗದೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಮೂರ್ತಿಗಳಾಗಬೇಕು. ಯುವಜನರು ದೇಶಪ್ರೇಮ ಹಾಗೂ ದೇಶಾಭಿಮಾನ ಬೆಳೆಸಿಕೊಂಡು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಆಗ ಮಾತ್ರ ರಾಯಣ್ಣ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸಾರಿಗೆ ಸಚಿವ ಬೈರತಿ ಸುರೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಯಾವುದೇ ಕಪ್ಪುಚುಕ್ಕೆ ಇಲ್ಲದೆ ‘ರಾಮರಾಜ್ಯ’ದಂತೆ ಆಡಳಿತ ನಡೆಸಿ ಮಾದರಿಯಾಗಿದ್ದಾರೆ. ಶಿವಕುಮಾರ್ ಮುಖ್ಯಮಂತ್ರಿ ಆಗಿರುವ ಶ್ರೇಯ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು ಎಂದರು.
ಶಾಸಕ ಕೆ.ಎಸ್. ಆನಂದ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ಸರ್ಕಾರದಿಂದ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. 2028ರಲ್ಲಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಸಿದ್ದರಾಮಯ್ಯ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಅವರು ಕರ್ನಾಟಕದ ಪಾಲಿನ ‘ಅನ್ನರಾಮಯ್ಯ’ ಎಂದು ಬಣ್ಣಿಸಿದರು.
ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಭದ್ರಾ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ₹408 ಕೋಟಿ, ನಬಾರ್ಡ್ನಿಂದ ₹455 ಕೋಟಿ ಅನುದಾನ, ಕಡೂರು-ಬೀರೂರಿನ ಜೀವನಾಡಿಯಾಗಿರುವ ಮದಗದ ಕೆರೆ ಅಭಿವೃದ್ಧಿಗೆ ₹50 ಕೋಟಿ, ಕಡೂರು ಪಟ್ಟಣದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ₹37 ಕೋಟಿ ಹಾಗೂ ಬೀರೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಗೆ ₹35 ಕೋಟಿ ಅನುದಾನ ದೊರೆತಿದೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆಧುನೀಕರಣಕ್ಕೆ ₹15 ಕೋಟಿ, ಶಿಕ್ಷಣ ವ್ಯವಸ್ಥೆ ಬಲಪಡಿಸಲು ವಸತಿಶಾಲೆ ಹಾಗೂ ಕಾಲೇಜುಗಳ ನಿರ್ಮಾಣಕ್ಕೆ ₹160 ಕೋಟಿ ಸೇರಿದಂತೆ ಕುಡಿಯುವ ನೀರು, ಯುಜಿಡಿ ಮತ್ತಿತರ ಕಾಮಗಾರಿಗಳಿಗೆ ಒಟ್ಟಾರೆ ₹1,200 ಕೋಟಿಯಷ್ಟು ಅನುದಾನ ದೊರೆತಿದೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಕೆ.ಆರ್. ನಗರದ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಬೀರೂರು ಕುರುಬರ ಸಂಘದ ಅಧ್ಯಕ್ಷ ಎಸ್.ಎಚ್. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಎಚ್.ಡಿ. ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಇಂದಿರಾ ಕ್ಯಾಂಟೀನ್ ಮೇಲುಸ್ತುವಾರಿ ಸಮಿತಿ ರಾಜ್ಯ ಅಧ್ಯಕ್ಷ ಪಿ.ಸಿ. ಪ್ರಸನ್ನ (ಪಂಚನಹಳ್ಳಿ), ರಾಜ್ಯ ಪರಿಸರ ಮೌಲ್ಯಮಾಪನಾ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್, ಕಡೂರು ತಾಲ್ಲೂಕು ಕುರುಬರ ಸಮಾಜದ ಅಧ್ಯಕ್ಷ ಭೋಗಪ್ಪ, ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎಚ್. ಚಂದ್ರಪ್ಪ, ಬೀರೂರು ಕುರುಬರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
I have sincerely tried to eliminate inequality.
Leave a comment