ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ತಪ್ಪಲು ಹಾಗೂ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಗಣನೀಯವಾಗಿ ಹೆಚ್ಚಾಗಿದ್ದು, ಪ್ರಸಿದ್ದ ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿತ ಸಂಭವಿಸಿದೆ.
ವಿಶೇಷವೆಂದರೆ, ಸಂಭಾವ್ಯ ಅಪಾಯವನ್ನು ತಡೆಯಲು ಕಾಂಕ್ರೀಟ್ ತಡೆಗೋಡೆ ನಿರ್ಮಿಸುತ್ತಿದ್ದ ಜಾಗದಲ್ಲೇ ಮಣ್ಣು ಕುಸಿದಿದೆ. ಈ ಮಾರ್ಗವು ಅತ್ತಿಗುಂಡಿ, ಮಹಲ್ ಸೇರಿದಂತೆ ಹತ್ತಾರು ಪ್ರಮುಖ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿರುವುದರಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ರಸ್ತೆಗೆ ಬಿದ್ದಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಮಳೆ ಬಿಡುವು ನೀಡದೆ ಮುಂದುವರಿದಿರುವುದರಿಂದ ಮತ್ತಷ್ಟು ಭಾಗಗಳಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ. ಈ ಭಾಗಕ್ಕೆ ಆಗಮಿಸುವ ಪ್ರವಾಸಿಗರು ಅತ್ಯಂತ ಜಾಗರೂಕರಾಗಿ ಮತ್ತು ಎಚ್ಚರಿಕೆಯಿಂದ ಪ್ರಯಾಣಿಸಬೇಕಿದೆ.
Hill collapse near Kavikal Gandi on Datta Peetha Marg
Leave a comment