ಚಿಕ್ಕಮಗಳೂರು: ಜಿಂಕೆ ಮಾಂಸ ಮಾರಾಟ ಹಾಗೂ ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದ ಜಾಲದ ಮೇಲೆ ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಭಾನುವಾರ ಮಾಗಡಿ ಹ್ಯಾಂಡ್‌ಪೋಸ್ಟ್ ಸಮೀಪದ ರಾಜು ಅಲಿಯಾಸ್ ದೇವರಾಜು ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಮಾರಾಟ ಮತ್ತು ಹಂಚಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಒಂದು ಕೆ.ಜಿ. ಬೇಯಿಸಿದ ಜಿಂಕೆ ಮಾಂಸವನ್ನು ವಶಪಡಿಸಿಕೊಂಡು, ರಾಜು ಅಲಿಯಾಸ್ ದೇವರಾಜು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಚಿಕ್ಕಮಗಳೂರು ನಗರದ ಟಿಪ್ಪುನಗರ ನಿವಾಸಿ ಕುಮಾರ್ ಪಿ ಎಂಬಾತ ಜಿಂಕೆ ಮಾಂಸವನ್ನು ಮಾರಾಟ ಮಾಡಿದ್ದಾಗಿ ರಾಜು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಅಕ್ರಮ ಮಾಂಸ ಮಾರಾಟ ಜಾಲದ ಕುರಿತು ಮಾಹಿತಿ ಲಭ್ಯವಾಗಿದೆ.
ಈ ಜಾಲಕ್ಕೆ ಬೇಲೂರಿನ ಅಲಿ ಎಂಬಾತ ಮಾಂಸ ಸರಬರಾಜು ಮಾಡುತ್ತಿದ್ದ ಪ್ರಮುಖ ಕಿಂಗ್‌ಪಿನ್ ಎಂದು ತಿಳಿದುಬಂದಿದೆ. ಅಲ್ಲದೆ, ಕರ್ತಿಕೆರೆಯ ಯೋಗಿಗೌಡ ಎಂಬಾತನೂ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಬಂಧಿತ ರಾಜು ಅಲಿಯಾಸ್ ದೇವರಾಜು ಹಾಗೂ ಕುಮಾರ್ ಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್, ವಲಯ ಅರಣ್ಯಾಧಿಕಾರಿ ಹರೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ದಿನೇಶ್, ನಾರಾಯಣ, ಪ್ರದೀಪ್, ಮಂಜುನಾಥ್ ಹಾಗೂ ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಿಂಕೆ ಸೇರಿದಂತೆ ವನ್ಯಜೀವಿಗಳ ಬೇಟೆ, ಮಾಂಸ ಮಾರಾಟ ಮತ್ತು ಅಕ್ರಮ ಸಾಗಾಟದ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದೆ.
Deer meat sale racket uncovered; two arrested
Leave a comment