ಕಡೂರು: ಅಡಿಕೆ ವ್ಯಾಪಾರಿಯೊಬ್ಬರಿಗೆ ಬರೋಬ್ಬರಿ 22 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದ ಪೂಜಾರಿ ಮತ್ತು ಆತನ ಮಗ ಸೇರಿ ಹೂತಿಟ್ಟ ಚಿನ್ನದ ಆಮಿಷವೊಡ್ಡಿ ವಂಚನೆ ಎಸಗಿದ್ದಾರೆ.
ಬಾಣವಾರದ ಗರುಡನಗಿರಿ ಗ್ರಾಮದ ಜುಂಜಪ್ಪ ದೇವಸ್ಥಾನದ ಪೂಜಾರಿ ಸ್ವಾಮಿ ಮತ್ತು ಆತನ ಮಗ ಗಂಗಾಧರ ಈ ಪ್ರಕರಣದ ಆರೋಪಿಗಳು. ಪರಿಚಯಸ್ಥರಾಗಿದ್ದ ಅಡಿಕೆ ವ್ಯಾಪಾರಿ ಹೇಮರಾಜ್ ಅವರಿಗೆ ಫೋನ್ ಮಾಡಿದ್ದ ಪೂಜಾರಿ ಸ್ವಾಮಿ, ದೇವಸ್ಥಾನದ ಪಕ್ಕದಲ್ಲಿ ನಿಧಿ ರೂಪದ 7 ಚಿನ್ನದ ಮಡಿಕೆಗಳು ಸಿಕ್ಕಿವೆ ಎಂದು ನಂಬಿಸಿದ್ದರು.
ಆ ಮಡಿಕೆಗಳಲ್ಲಿ ಒಂದನ್ನು ನಿಮಗೆ ನೀಡುತ್ತೇನೆ, ಅದರಿಂದ ನಿಮ್ಮ ಮನೆ ಸಮೃದ್ಧಿಯಾಗುತ್ತದೆ ಎಂದು ಆಸೆ ತೋರಿಸಿದ್ದರು. ಆರೋಪಿಗಳು ಕಡೂರಿನ ಎಪಿಎಂಸಿ ಮಾರುಕಟ್ಟೆ ಬಳಿ ಹೇಮರಾಜ್ ಅವರನ್ನು ಭೇಟಿಯಾಗಿ, ಮಡಿಕೆಯಲ್ಲಿ ಚಿನ್ನದ ನಾಣ್ಯಗಳಂತಹ ವಸ್ತುಗಳನ್ನು ತೋರಿಸಿ ನಂಬಿಸಿದ್ದರು. ಇದನ್ನು ಎಲ್ಲಿಯೂ ಪರೀಕ್ಷೆ ಮಾಡಿಸಬೇಡಿ ಎಂದು ಎಚ್ಚರಿಕೆ ನೀಡಿ, ಅವರಿಂದ 22 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಒಂದು ಮಡಿಕೆಯನ್ನು ಹಸ್ತಾಂತರಿಸಿದ್ದರು.
ಇಷ್ಟಕ್ಕೇ ಸುಮ್ಮನಾಗದ ತಂದೆ ಮಗ. 20 ದಿನಗಳ ನಂತರ ಮತ್ತೆ ಕರೆ ಮಾಡಿ ಮಡಿಕೆಯಲ್ಲಿ ಹೆಚ್ಚಿನ ಚಿನ್ನವಿದೆ ಎಂದು ಹೇಳಿ ಹೆಚ್ಚುವರಿಯಾಗಿ 3.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಹೇಮರಾಜ್ ಅವರು ಅಕ್ಕಸಾಲಿಗರಲ್ಲಿ ಚಿನ್ನವನ್ನು ಪರೀಕ್ಷಿಸಿದಾಗ ಅದು ನಕಲಿ ಎಂದು ತಿಳಿದುಬಂದಿದೆ.
ತಕ್ಷಣವೇ ಎಚ್ಚೆತ್ತ ಸಂತ್ರಸ್ತರು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Areca nut trader fined Rs 22 lakh
Leave a comment