ಚಿಕ್ಕಮಗಳೂರು: ಪ್ರತಿಯೊಬ್ಬ ಸಾರ್ವಜನಿಕರ ಉತ್ತಮ ಆರೋಗ್ಯ ನಮ್ಮೆಲ್ಲರ ಗುರಿ. ಅನಾರಾಗ್ಯ ಪೀಡಿತರಾದ ವ್ಯಕ್ತಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ಪೂರ್ಣವಾಗಿ ಮನೆಗೆ ತೆರಳಿಸುವ ಕರ್ತವ್ಯವನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ನಗರದ ಜಿಲ್ಲಾಸ್ಪತ್ರೆಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ಇಂದು ನೀಡಿ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಬೇಟಿ ನೀಡಿಅಲ್ಲಿಯ ವ್ಯವಸ್ಥೆ ಹಾಗೂ ರೋಗಿಗಳಿಗೆ ದೊರೆಯುತ್ತಿರುವ ವೈದ್ಯಕೀಯ ಸೌಲಭ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ ಮಾಹಿತಿ ಪಡೆದು ಅವರು ಮಾತನಾಡಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕ, ಔಷಧ ವಿತರಣಾ ವಿಭಾಗ ಸೇರಿದಂತೆ ವಿವಿಧ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆ ಹಾಗೂ ವೈದ್ಯಕೀಯ ಸೇವೆಗಳ ಗುಣಮಟ್ಟದ ಕುರಿತು ಮಾಹಿತಿ ಪಡೆದುಕೊಂಡರು.
ಈ ಹಿಂದೆ ಒ.ಪಿ.ಡಿ ಬ್ಲಾಕ್ ಸಮಸ್ಯೆ ಕಂಡು ಬಂದಿದ್ದು ಇದನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಹಾಗೂ ತುರ್ತು ಚಿಕಿತ್ಸಾ ಘಟಕವನ್ನು ಪರಿಶೀಲಿಸಿದ್ದು ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು
ಪ್ರಸ್ತುತ ಐ.ಸಿ.ಯು ನಲ್ಲಿ ೦೬ ವೆಂಟಿಲೇಟರ್‌ಗಳು ವ್ಯವಸ್ಥಿತವಾಗಿ ಲಭ್ಯವಿದ್ದು ಯಾವುದೇ ರೋಗಿ ಆಸ್ಪತ್ರೆಗೆ ದಾಖಲಾದರು ಸಮರ್ಪಕವಾಗಿ ಚಿಕಿತ್ಸೆ ನೀಡಲು ಸಿದ್ದವಿದೆ. ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ಯಂತ್ರದ ಅವಶ್ಯಕತೆಯನ್ನು ಗಮನಿಸಿ ೬೫ ಲಕ್ಷ ರೂಗಳ ನೂತನ ಎಂಡೋಕ್ಸೋಪಿ ಯಂತ್ರವನ್ನು ಅಳವಡಿಸಲಾಗಿದೆ ಹಾಗೂ ಇದರ ಬಳಕೆಗೆ ಶಸ್ತ್ರ ಚಿಕಿತ್ಸಕರನ್ನು ನೇಮಿಸಲಾಗಿದೆ. ಇನ್ನೂ ಜಿಲ್ಲೆಯಲ್ಲಿ ತಾಯಿ ಮಗು ಆಸ್ಪತ್ರೆ ಪೂರ್ಣಗೊಂಡ ಬಳಿಕ ಐ.ವಿ.ಎಫ್ ಚಿಕಿತ್ಸೆಗೂ ಕ್ರಮವಹಿಸಲು ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.
ಸೂಪರ್ ಸ್ಪೇಷಲಿಟಿ ಆಸ್ಪತ್ರೆ ಹಾಗೂ ಹೃದ್ರೋಗ ತಜ್ಞರು, ಕ್ಯಾನ್ಸರ್ ತಜ್ಞರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಕ್ರಮವಹಿಸಿದೆ. ವೈದ್ಯಕೀಯ ಆಸ್ಪತ್ರೆ ಕಟ್ಟಡ ಕಾಮಗಾರಿ ಈಗಾಗಲೇ ಮುಕ್ತಾಯ ಹಂತಕ್ಕೆ ಬಂದಿದ್ದು ವೈದ್ಯರ ನೇಮಕಾತಿ ಹಾಗೂ ಅಗತ್ಯ ಚಿಕಿತ್ಸಾ ಯಂತ್ರೋಪಕರಣಗಳ ಅಳವಡಿಕೆಗೆ ೨೨ ಕೋಟಿ ರೂಗಳ ಟೆಂಡರ್ ಕರೆಯಲಾಗಿದ್ದು ಎಲ್ಲಾ ಪ್ರಕ್ರಿಯೇ ಪೂರ್ಣಗೊಂಡ ನಂತರ ಶೀಘ್ರವಾಗಿ ಸಚಿವರಿಂದ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರವು ೨ ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ತುರ್ತು ಬೇಡಿಕೆ ಇರುವ ಕಾರ್ಯಗಳಿಗೆ ಬಳಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಬಲವಂತದ ಸಿಜೇರಿಯನ್ ಹೆರಿಗೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕುರಿತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ ೯೦ ರಷ್ಟು ಸಿಜೇರಿಯನ್ ಹೆರಿಗೆ ಮಾಡಿಸಲಾಗುತ್ತಿದೆ ಹಾಗೂ ಸರ್ಕಾರಿ ಆಸ್ಪತೆಗಳಲ್ಲಿ ಶೇಕಡ ೫೧ ರಷ್ಟು ಸಿಜೇರಿಯನ್ ಹೆರಿಗೆ ಮಾಡಲಾಗುತ್ತಿದೆ. ಇದರ ವ್ಯತ್ಯಾಸಗಳ ಕುರಿತು ಸಾರ್ವಜನಿಕರು ಗಮನಿಸಬೇಕು ಜೊತೆಗೆ ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲಿರುವ ಪೂರ್ವಗ್ರಹ ಆಲೋಚನೆಯನ್ನು ಹೋಗಲಾಡಿಸಬೇಕು. ಸಿಜೇರಿಯನ್ ಹೆರಿಗೆ ಪ್ರಮಾಣ ಕಡಿಮೆಗೊಳಿಸಿ ಸಾಮನ್ಯ ಹೆರಿಗೆ ಕಾರ್ಯ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಸರ್ಜನ್‌ರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಜಿಲ್ಲೆಯಲ್ಲೆ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಏಕೈಕ ಯಂತ್ರವು ಇದೀಗ ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಹೀಗಾಗಿ ಅವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಸೌಲಭ್ಯಗಳ ಕೊರತೆಯಾಗದಂತೆ ಅಧಿಕಾರಿಗಳ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಜವಾಬ್ದಾರಿವಹಿಸಬೇಕು ಎಂದ ಅವರು ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೋಗಿಗಳಿಗೆ ಅಗತ್ಯವಿರುವ ಔಷಧಗಳು ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ವೈದ್ಯರು ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮವಿಶ್ವಾಸವುಳ್ಳ ಉತ್ತಮ ವೈದ್ಯರು ಲಭ್ಯವಿದ್ದಾರೆ. ಆಸ್ಪತ್ರೆಗೆ ಹೆಚ್ಚು ರೋಗಿಗಳು ಬರುವ ಸಮಯದಲ್ಲಿ ಒಪಿಡಿ ಬ್ಲಾಕ್‌ನಲ್ಲಿ ಜನ ಸಂದಣಿ ಹೆಚ್ಚಾಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಹೆಚ್ಚುವರಿ ಕೌಂಟರ್ ಸ್ಥಾಪಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ರಕ್ತ ಪರೀಕ್ಷಾ ಕೇಂದ್ರದಲ್ಲಿ ರಕ್ತದ ಪರೀಕ್ಷೆ ಜೊತೆಗೆ ಪರೀಕ್ಷಾ ವರದಿ ಪಡೆಯಲು ಸಾರ್ವಜನಿಕರು ಸೇರುವುದರಿಂದ ದಟ್ಟಣೆ ಹೆಚ್ಚಾಗುತ್ತಿದೆ ಇನ್ನೂ ಒಂದು ತಿಂಗಳೊಳಗಾಗಿ ರಕ್ತ ಪರೀಕ್ಷ ವರದಿಯನ್ನು ತಮ್ಮ ಮೊಬೈಲ್‌ಗೆ ಕಳುಹಿಸುವ ಕಾರ್ಯವನ್ನು ಕೈಗೊಳ್ಳಲು ಅಧಿಕಾರಿಗಳು ಕ್ರಮವಹಿಸಲಿದ್ದಾರೆ ಎಂದ ಅವರು ಸರ್ಕಾರದಿಂದ ಬಂದಿರುವ ಅನುದಾನವನ್ನು ತುರ್ತು ಕಾರ್ಯಗಳಿಗೆ ಬಳಸಿಕೊಂಡು ಆಸ್ಪತ್ರೆಯ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಜಿಲ್ಲಾ ಸರ್ಜನ್ ದೇವರಾಜ್ ಟಿ.ಎಂ, ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾಸ್ಪತ್ರೆಯ ಪರಿಶೀಲನೆ ನಂತರ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಕಾಮಗರಿ ಪರಿಶೀಲಿಸಿದರು
MLA – District Collector paid a surprise visit to the district hospital
Leave a comment