Home namma chikmagalur chikamagalur ಕಾಡಾನೆಗಳ ಹಾವಳಿ ಖಂಡಿಸಿ ಮೂಡಿಗೆರೆ ಬಂದ್ ಯಶಸ್ವಿ
chikamagalurHomeLatest Newsnamma chikmagalur

ಕಾಡಾನೆಗಳ ಹಾವಳಿ ಖಂಡಿಸಿ ಮೂಡಿಗೆರೆ ಬಂದ್ ಯಶಸ್ವಿ

Share
Share

ಮೂಡಿಗೆರೆ: ಕಾಡಾನೆಗಳ ಹಾವಳಿಯಿಂದ ಈಗಾಗಲೇ ಕಾಫಿ ತೋಟಗಳು ನಾಶವಾಗಿ, ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇಲೂರಿನಿಂದ ತಾಲೂಕಿಗೆ ಬಂದ ಕಾಡಾನೆಗಳನ್ನು ಬಂದ ದಾರಿಯಲ್ಲಿ ವಾಪಾಸು ಅಟ್ಟಬೇಕು. ರಾಜ್ಯ ಸರಕಾರ ಭದ್ರ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವ ನಿರ್ಧಾರ ಕೈ ಬಿಡಬೇಕೆಂದು ಆಗ್ರಹಿಸಿ ಬುಧವಾರ ನಡೆಸಿದ ಮೂಡಿಗೆರೆ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಬೆಳಿಗ್ಗೆ ೬ ರಿಂದ ಬಂದ್ ಪ್ರಕ್ರಿಯೆ ಆರಂಭವಾಗಿ ಸಂಜೆಯವರೆಗೂ ಮುಂದುವರೆಯಿತು. ಪಟ್ಟಣದ ಬಹುತೇಕ ಎಲ್ಲಾ ಶಾಲೆ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಆಟೊಗಳು ರಸ್ತೆಗಿಳಿಯಲಿಲ್ಲ. ವಕೀಲರು ಕಲಾಪದಲ್ಲಿ ಪಾಲ್ಗೊಳ್ಳದೆ ನ್ಯಾಯಾಲಯದಿಂದ ಮೆರವಣಿಗೆ ನಡೆಸಿ ಪ್ರತಿಭಟನೆಗೆ ಕೈ ಜೋಡಿಸಿದರು.

ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆರಂಭದಲ್ಲಿ ಪಶ್ಚಿಮ ವಲಯ ಐಜಿಪಿ ಶಶಿಕುಮಾರ್, ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರು ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ವ್ಯವಸ್ಥೆ ಪರಿಶೀಲಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು.

ಸುಮಾರು ೧ ಗಂಟೆ ಮೂಡಿಗೆರೆ-ಕಡೂರು ರಾಷ್ಟ್ರೀಯ ಹೆದ್ದಾರಿ ೧೭೩ ತಡೆದು ಪ್ರತಿಭಟನೆ ನಡೆಸಲಾಯಿತು. ಆನೆಗಳಿಂದ ಧ್ವಂಸಗೊಂಡ ಕಾಫಿ ಮತ್ತು ಅಡಿಕೆ ಗಿಡಗಳನ್ನು ತಂದು ರಸ್ತೆಯಲ್ಲಿಟ್ಟು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಡಿಸಿಎಫ್ ಭೇಟಿ ನೀಡುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ರಸ್ತೆ ತಡೆ ಕೈಬಿಡುವಂತೆ ಮನವೊಲಿಸಿದಾಗ, ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಹೊರಟರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಡಿಸಿಎಫ್ ಬೋರಯ್ಯ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ನಂತರ ಮಾತನಾಡಿ, ಬೆಂಗಳೂರಿನಲ್ಲಿ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತದೆ. ಅಲ್ಲಿ ತೀರ್ಮಾನವಾಗುವವರೆಗೂ ಕಾಡಾನೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.

ಪ್ರತಿಭಟನಾ ಸ್ಥಳದಲ್ಲಿ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ತಾಲೂಕಿನ ಜನ ತಾಳ್ಮೆ ವಹಿಸಿದ್ದಾರೆ. ಅದನ್ನು ದೌರ್ಬಲ್ಯವೆಂದು ಭಾವಿಸದೇ ತಾಳ್ಮೆ ಪರೀಕ್ಷಿಸಬೇಡಿ, ನಿಮ್ಮ ಪರಿಹಾರ ನಮಗೆ ಅಗತ್ಯವಿಲ್ಲ. ಕಾಡಾನೆಗಳನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯಕ್ಕೆ ಓಡಿಸುವ ತೀರ್ಮಾನ ಕೈಗೊಳ್ಳಬೇಕು. ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ನೀಡಿ ಜನರಿಂದ ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸಿ ಜನರ ದಿಕ್ಕುತಪ್ಪಿಸಲು ಹೊರಟಿದ್ದಾರೆ. ಆಡಳಿತ ಪಕ್ಷ ಶಾಸಕರಿಗೆ ಸರಕಾರದ ಮಟ್ಟದಲ್ಲಿ ಸಾಮರ್ಥ್ಯವಿರುತ್ತದೆ. ಅದನ್ನು ಬಳಸಿಕೊಂಡು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಈಗ ಕಾಫಿ ಕೊಯ್ಲು ಸಮಯ. ಗೌತಹಳ್ಳಿ ಮತ್ತು ಬಾರದಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡಾನೆಗಳಿಂದ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಆಟೋ ಚಾಲಕರು ಆ ಭಾಗಕ್ಕೆ ಬಾಡಿಗೆ ಹೋಗಲಾಗುತ್ತಿಲ್ಲ. ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇಂತಹ ಗಂಭೀರ ಸಮಸ್ಯೆ ಬಗ್ಗೆ ಚಿಂತಿಸದೇ ಮಾನವೀಯತೆ ಮರೆತಿರುವ ಸಚಿವ ಶಿವಲಿಂಗೇಗೌಡ ಅವರನ್ನು ಸಚಿವ ಸ್ಥಾನದದಿಂದ ವಜಾಗೊಳಿಸಬೇಕು. ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ನೀಡಿ ಹೈಡ್ರಾಮ ಮಾಡುವ ಬದಲು ನಮ್ಮ ಹೋರಾಟಕ್ಕೆ ಕೈಜೋಡಿಸಬೇಕಿತ್ತು ಎಂದು ಹೇಳಿದರು.

ಪಪಂ ಮಾಜಿ ಅಧ್ಯಕ್ಷ ಪಿ.ಜಿ.ಅನುಕುಮಾರ್ ಮಾತನಾಡಿ, ಈ ಭಾಗದಲ್ಲಿ ೩೦೦ ಇಂಚು ಮಳೆಯಾಗಿ ರೈತರ ಬೆಳೆ ನೆಲ ಕಚ್ಚುತ್ತದೆ. ಕಾಡಾನೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿಯಿಂದ ಜಮೀನು ಪಾಳು ಬಿಟ್ಟು ರೈತರು ಬೀದಿಗೆ ಬಿದ್ದಿದ್ದಾರೆ. ಕಾಡಾನೆ ಹಾವಳಿಗೆ ಹೆದರಿ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ಬೇಲೂರಿನಿಂದ ತಾಲೂಕಿಗೆ ಬಲತ್ಕಾರವಾಗಿ ಕರೆತಂದಿರುವ ಕಾಡಾನೆಗಳನ್ನು ವಾಪಾಸು ಅಟ್ಟಬೇಕು. ಇಲ್ಲವಾದರೆ ನಾಳೆಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶ್ರೀ ರಾಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ್ ಕಡಿದಾಳ್ ಮಾತನಾಡಿ ಜಿಲ್ಲೆಯಲ್ಲಿ ೫ ಮಂದಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಅದರಲ್ಲಿ ಮೂವರು ರಾಜೀನಾಮೆ ನೀಡಲು ಹೊರಟಿದ್ದು ನಾಚಿಗೇಡಿನ ಸಂಗತಿ. ಕಾಡಾನೆ ಸಮಸ್ಯೆ ತಂದಿಟ್ಟ ಸಚಿವ ಶಿವಲಿಂಗೇಗೌಡ ಮತ್ತು ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಬೇಕು. ಮಂಗಳವಾರ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಾಲೂಕಿಗೆ ಬಂದಿದ್ದರೂ ಕಾಡಾನೆ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಇಲ್ಲಿನ ಬೆಳೆಗಾರರ ಸಂಘ ಪ್ರತಿಭಟನೆಗೆ ಬೆಂಬಲ ನೀಡಿಲ್ಲ. ಇವರು ರೈತರ ಕ್ಷೆಮೆಯಾಚಿಸಬೇಕು ಎಂದರು

ಪ್ರತಿಭಟನೆಯಲ್ಲಿ ವಿವಿಧ ಪಕ್ಷದ ಮುಖಂಡರಾದ ಜೆ.ಎಸ್.ರಘು, ಕೆ.ಸಿ.ರತನ್, ಜಾಕಿರ್ ಹುಸೇನ್, ಭರತ್ ಬಾಳೂರು, ಎಂ.ಸಿ.ಹೂವಪ್ಪ, ಡಿ.ಎಸ್.ರಮೇಶ್‌ಗೌಡ, ಬಿ.ಸಿ.ದಯಾಕರ್, ಗಬ್ಬಳ್ಳಿ ಚಂದ್ರೇಗೌಡ, ವಿಜಯ್‌ಕುಮಾರ್, ವಿಭಾ ಸುಷ್ಮಾ, ವಿಕ್ರಂ ಬಣಕಲ್, ಟಿ.ಎಂ.ಗಜೇಂದ್ರ, ಹಾಲಪ್ಪಗೌಡ, ಸಿ.ಆರ್.ನೇಮರಾಜ್, ಎಲ್.ಬಿ.ರಮೇಶ್, ಸಂಜಯ್ ಕೊಟ್ಟಿಗೆಹಾರ, ಯು.ಪಿ.ಜಗದೀಶ್, ದೀಪಕ್ ದೊಡ್ಡಯ್ಯ, ಡಿ.ಕೆ.ಲಕ್ಷ್ಮಣ್‌ಗೌಡ, ಜಕರಿಯ ಜಾಕಿರ್, ಬ್ರಿಜೇಶ್ ಕಡಿದಾಳ್, ವಕೀಲರಾದ, ವಕೀಲ ರಘು, ಡಿ.ಕೆ.ಪ್ರಸನ್ನಕುಮಾರ್, ಮಂಜುನಾಥ್ ಬೆಟ್ಟಗೆರೆ ಮತ್ತಿತರರಿದ್ದರು.

Mudigere Bandh protesting against wild elephant menace proves successful

 

Share

Leave a comment

Leave a Reply

Your email address will not be published. Required fields are marked *

Don't Miss

ಮನೆ ಬೀಗ ಒಡೆದು ಚಿನ್ನ, ಬೆಳ್ಳಿ ಹಾಗೂ ನಗದು ಕಳವು

ಚಿಕ್ಕಮಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಒಡೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ....

ಜೀವರಾಜ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹೈಕೋರ್ಟ್‌ನಿಂದ ವಜಾ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್...

Related Articles

ಕಾಡಾನೆಯಿಂದ ಕಾಫಿ, ಅಡಿಕೆ -ತೆಂಗಿನ ಮರಗಳು ಧ್ವಂಸ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕಾರ್ಬೈಲು ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ,...

ಸರಗಳ್ಳರ ಬಂಧನ: 21 ಲಕ್ಷ ರೂ. ಮೌಲ್ಯದ ಕದ್ದಮಾಲು ವಶ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಆತಂಕ...

ಸಂವಿಧಾನದ ಆಶಯಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಚಿಕ್ಕಮಗಳೂರು:  ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಅದರಲ್ಲಿರುವ ಮೂಲಭೂತ ಕರ್ತವ್ಯಗಳನ್ನೂ ಪ್ರತಿಯೊಬ್ಬರೂ ಜೀವನದಲ್ಲಿ...

‘ಅಸ್ಪೃಶ್ಯತೆ ನಿವಾರಣೆಗೆ ಜನರ ಮನಸ್ಥಿತಿ ಬದಲಾಗಬೇಕು’

ಚಿಕ್ಕಮಗಳೂರು: ಸಂವಿಧಾನ ಮತ್ತು ಕಾನೂನಿನಿಂದ ಮಾತ್ರ ದೇಶದಲ್ಲಿರುವ ಮೇಲು-ಕೀಳು ಹಾಗೂ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ....