ಚಿಕ್ಕಮಗಳೂರು: ನಗರದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸಿಬ್ಬಂದಿಗೆ ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದು, ಕಾರ್ಮಿಕರ ನ್ಯಾಯಯುತ ರಜೆ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಸಿಪಿಐ ಮುಖಂಡೆ ರಾಧಾ ಸುಂದರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸಿಬ್ಬಂದಿಗಳು ಅನಾರೋಗ್ಯದ ಕಾರಣದಿಂದ ಅನಿವಾರ್ಯವಾಗಿ ದೂರವಾಣಿ ಮೂಲಕ ರಜೆ ಕೋರಿದರೂ ಅಥವಾ ಖುದ್ದಾಗಿ ಕಚೇರಿಗೆ ತೆರಳಿ ರಜೆ ಪತ್ರ ಸಲ್ಲಿಸಲು ಮುಂದಾದರೂ ಅದನ್ನು ಸ್ವೀಕರಿಸುತ್ತಿಲ್ಲ. ಬದಲಾಗಿ ಸಂಬಂಧಪಟ್ಟ ಸಿಬ್ಬಂದಿಯನ್ನು ಗೈರುಹಾಜರಿ ಎಂದು ದಾಖಲಿಸಲಾಗುತ್ತಿದೆ. ಕಚೇರಿಯಲ್ಲಿ ರಜೆ ಪತ್ರ ಸ್ವೀಕರಿಸಲು ಸೂಕ್ತ ವ್ಯವಸ್ಥೆಯಾಗಲಿ, ಜವಾಬ್ದಾರಿಯುತ ಅಧಿಕಾರಿಗಳಾಗಲಿ ಇಲ್ಲದಿರುವುದು ಸಿಬ್ಬಂದಿಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ದೂರಿದ್ದಾರೆ.
ಸಿಬ್ಬಂದಿಗಳು ತಿಂಗಳಿಗೆ 22ರಿಂದ 24 ದಿನಗಳವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೂ ನಿಯಮಾನುಸಾರ ದೊರೆಯಬೇಕಾದ ಗಳಿಕೆ ರಜೆ (EL) ಮತ್ತು ಸಾಂದರ್ಭಿಕ ರಜೆ (CL) ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ನೌಕರರು ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಹಾಗೂ ರಜೆ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ರಿಜಿಸ್ಟರ್ ನಿರ್ವಹಿಸುವಂತೆ ಒತ್ತಾಯಿಸಿ ನೂರಕ್ಕೂ ಹೆಚ್ಚು ಅರ್ಜಿಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ (ಡಿಸಿ) ಸಲ್ಲಿಸಲಾಗಿದೆ. ಸಮಸ್ಯೆಗಳನ್ನು ಸರಿಪಡಿಸಲು ಡಿಸಿ ಅವರು ಐದು ದಿನಗಳ ಕಾಲಾವಕಾಶ ಕೇಳಿದ್ದಾರೆ ಎಂದು ರಾಧಾ ಸುಂದರೇಶ್ ಮಾಹಿತಿ ನೀಡಿದ್ದಾರೆ.
ಡಿಪೋ ಮ್ಯಾನೇಜರ್ ಅವರ ವರ್ತನೆ ಮತ್ತು ಸಿಬ್ಬಂದಿಯೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಬದಲಾಯಿಸಬೇಕು. ಕಾರ್ಮಿಕರ ರಜೆ ಹಕ್ಕುಗಳನ್ನು ಗೌರವಿಸಿ, ಅರ್ಜಿಗಳನ್ನು ನಿಯಮಾನುಸಾರ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಡಿಪೋ ಮ್ಯಾನೇಜರ್ ವಿರುದ್ಧ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Harassment of KSRTC staff by Depot Manager
Leave a comment