ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಮಂಗಳವಾರ ಜಿಲ್ಲಾಡಳಿತ ಪ್ರಕಟಿಸಿದೆ. ಮತದಾರರ ಪಟ್ಟಿಯಿಂದ 85,769 ಹೆಸರು ಹೊರಗುಳಿದಿದ್ದರೆ, 8,74,462 ಮತ ದಾರರು ಪಟ್ಟಿಯಲ್ಲಿ ಉಳಿದಿಕೊಂಡಿದ್ದಾರೆ.
ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 4,29,733 ಪುರುಷರು, 4,44,712 ಮಹಿಳೆಯರು ಮತ್ತು 17 ಲಿಂಗತ್ವ ಅಲ್ಪಸಂಖ್ಯಾತರು ಮತದಾರರ ಪಟ್ಟಿಯಲ್ಲಿದ್ದಾರೆ. ಆ. 24ರಂದು ಪ್ರಕಟವಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ 8,63,516 ಮತದಾರರ ಹೆಸರುಗಳಿದ್ದು, ಆ ಬಳಿಕ ಒಟ್ಟು 10,946 ಮತದಾರರು ಹೆಚ್ಚಾಗಿದ್ದಾರೆ. ಎಸ್ಐಆರ್ ಪ್ರಕ್ರಿಯೆಗೆ ಮುಂಚೆ ಜಿಲ್ಲೆಯಲ್ಲಿ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ, ಜಿಲ್ಲೆಯಲ್ಲಿ ಒಟ್ಟು 85,769 ಮತದಾರರು ಕಡಿಮೆ ಆಗಿದ್ದಾರೆ.
ಎಸ್ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ ಒಟ್ಟು 9,60,231 ಮತದಾರರಿದ್ದರು. 2026ರ ಜೂನ್ 30ರಿಂದ ಆ. 17ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ವಿವರಿಸಿದರು.
ಎರಡು ಕಡೆ ಹೆಸರಿದ್ದವರು, ಸ್ಥಳಾಂತರಗೊಂಡವರು, ಮೃತರು ಸೇರಿ ಒಟ್ಟು 96,715 ಮಂದಿ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು 8,63,516 ಮತದಾರರ ಹೆಸರು ಕರಡು ಪಟ್ಟಿಯಲ್ಲಿತ್ತು. ಈ ಕರಡು ಪಟ್ಟಿಗೆ ಆಕ್ಷೇಪ ಸಲ್ಲಿಸಲು ಹಾಗೂ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದ ಮತದಾರರು ಹಕ್ಕು ಪ್ರತಿಪಾದಿಸಲು ಸೆ. 23ರ ತನಕ ಅವಕಾಶ ನೀಡಲಾಗಿತ್ತು.
*15,244 ಜನ ಹೊಸದಾಗಿ ಸೇರ್ಪಡೆಯಾದರು. ಈ ಪೈಕಿ ಅರ್ಹರದಲ್ಲದ 4,298 ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲಾಯಿತು. ಅಂತಿಮವಾಗಿ 10,946 ಸೇರ್ಪಡೆಯಾದರು. ಇದರಿಂದಾಗಿ ಅಂತಿಮವಾಗಿ ಮತದಾರರ ಸಂಖ್ಯೆ ಏರಿಕೆಯಾಗಿದೆ’ ಎಂದು ಹೇಳಿದರು.
ಕರಡು ಪಟ್ಟಿ ಪ್ರಕಟಿಸಿದ ಬಳಿಕ ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದ, ತಂದೆ-ತಾಯಿ ಹೆಸರು ಹೋಲಿಕೆಯಾಗದ 91,610 ಜನರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಇದರಲ್ಲಿ ಅರ್ಹರಲ್ಲದ 2,041 ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅಂತಿಮವಾಗಿ 8, 74,462 ಪಟ್ಟಿಯಲ್ಲಿ ಉಳಿದಿದ್ದಾರೆ ಎಂದು ವಿವರಿಸಿದರು.
ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಾಲಕಾಲಕ್ಕೆ ರಾಜಕೀಯ ಪಕ್ಷಗಳ ಸಭೆಯನ್ನೂ ನಡೆಸಿ ಮಾಹಿತಿ ನೀಡಲಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಬಯಸುವವರು ಅರ್ಜಿ ಸಲ್ಲಿಸಲು ಈಗಲೂ ಅವಕಾಶ ಇದೆ. ಪಟ್ಟಿಯಿಂದ ಹೊರಗುಳಿದಿದ್ದರೆ ಅವರು ಅರ್ಜಿ ಸಲ್ಲಿಸಿ ಹಕ್ಕು ಪ್ರತಿಪಾದಿಸಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
85769 names removed from the final electoral roll in the district
Leave a comment