ಚಿಕ್ಕಮಗಳೂರು: ಬರಗಾಲದ ನಡುವೆಯೂ ಎತ್ತಿನಹೊಳೆ ಯೋಜನೆಯ ನೀರಿನಿಂದ ಕೆ.ಬಿ. ಹಾಳ್ (ಕುರುಬರ ಬೂದಿಹಾಳ್) ಸೇರಿದಂತೆ ಸುತ್ತಮುತ್ತಲಿನ ಹಲವು ಕೆರೆಗಳು ತುಂಬಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ. ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ರೈತರ ತೋಟಗಳು, ಜಾನುವಾರುಗಳು ಹಾಗೂ ಜನಸಾಮಾನ್ಯರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು.
ವಡ್ಡರಹಳ್ಳಿ ಮತ್ತು ಕೆ.ಬಿ. ಹಾಳ್ ಕೆರೆಗಳಿಗೆ ಭಾನುವಾರ ಗಂಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದೆ ಕೆ.ಬಿ. ಹಾಳ್ ಕೆರೆಯಲ್ಲಿ ನೀರಿಲ್ಲದೆ ಬಿಕೋ ಎನ್ನುತ್ತಿದ್ದ ಪರಿಸ್ಥಿತಿ ಇತ್ತು. ಇದೀಗ ಕೆರೆಗೆ ನೀರು ಹರಿದು ಬಂದಿರುವುದು ಗ್ರಾಮಸ್ಥರ ಪಾಲಿಗೆ ಸಂತಸದ ಕ್ಷಣವಾಗಿದೆ. ಕೆರೆಯ ನೀರನ್ನು ಮಿತವಾಗಿ ಬಳಸಿಕೊಂಡು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
೨೦೧೩ರಿಂದ ೨೦೧೮ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ್ದರು. ಬಳಿಕ ೨೦೨೩ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಯ ಅನುಷ್ಠಾನಕ್ಕೆ ವೇಗ ದೊರೆತಿದೆ. ಇದರ ಪರಿಣಾಮವಾಗಿ ಬರದ ನಡುವೆಯೂ ಹಲವು ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿದೆ ಎಂದು ತಮ್ಮಯ್ಯ ತಿಳಿಸಿದರು.
ಹಳೆಬೀಡು ಕೆರೆ, ಕೆ.ಬಿ.ಹಾಳ್ ಕೆರೆ, ಬೆಳವಾಡಿ ಕೆರೆ, ಕುರುಬರಹಳ್ಳಿ ಕೆರೆ, ಮಚೇನಹಳ್ಳಿ ಕೆರೆ ಹಾಗೂ ದೇವನೂರು ಕೆರೆಗಳಿಗೆ ನೀರು ತುಂಬಿಸಲಾಗಿದೆ. ವಡೇರಹಳ್ಳಿ, ನಾಗರಾಳು, ಎಸ್. ಬಿದರೆ ಮತ್ತು ಗುಣಸಾಗರ ಭಾಗಗಳಲ್ಲಿಯೂ ಪಂಪ್‌ಗಳ ಮೂಲಕ ನೀರು ಹರಿಸುವ ಕಾರ್ಯ ಮುಂದುವರಿದಿದೆ. ಎತ್ತಿನಹೊಳೆ ಯೋಜನೆಯ ನೀರನ್ನು ಬಳಸಿಕೊಂಡು ಕೆರೆಗಳನ್ನು ತುಂಬಿಸುವ ಪ್ರಯತ್ನದಲ್ಲಿ ಸ್ಥಳೀಯ ಮುಖಂಡರು, ರೈತರು ಹಾಗೂ ಯುವಕರ ಸಹಕಾರವೂ ಮಹತ್ವದ್ದಾಗಿದೆ ಎಂದರು.
ಭದ್ರಾ ಉಪ ಕಣಿವೆ ಯೋಜನೆಯ ಮೂರನೇ ಹಂತಕ್ಕೆ ೩೧೨ ಕೋಟಿ ವೆಚ್ಚದ ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದ್ದು, ನಾಗರಾಳು, ದೇವನೂರು ಮತ್ತು ಗುಣಸಾಗರದ ಸುತ್ತಮುತ್ತ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ಎರಡು ವರ್ಷಗಳಲ್ಲಿ ಉಳಿದ ಕೆರೆಗಳಿಗೂ ನೀರು ಹರಿಸುವ ಕಾರ್ಯ ಶಾಶ್ವತವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಐದು ತಿಂಗಳೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರ ಬದುಕಿಗೆ ನೆರವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ೨,೦೦೦, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ನಿಗದಿತ ಮಿತಿಯೊಳಗೆ ಉಚಿತ ವಿದ್ಯುತ್ ಹಾಗೂ ಯುವನಿಧಿ ಯೋಜನೆಯಡಿ ಅರ್ಹ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪಡೆದವರಿಗೆ ನಿರ್ದಿಷ್ಟ ಅವಧಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗಳಿಗೆ ಸುಮಾರು ೪೩೦ ಕೋಟಿ ಜಮೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಜನರ ಜೀವನೋಪಾಯಕ್ಕೆ ನೆರವಾಗುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ತುರ್ತು ಕ್ರಮ ಕೈಗೊಳ್ಳಲು, ಬೋರ್‌ವೆಲ್ ಕೊರೆಸಲು ಹಾಗೂ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಲು ಅವಕಾಶವಿದೆ. ಅರ್ಹ ರೈತರಿಗೆ ಬರ ಪರಿಹಾರ ಒದಗಿಸುವ ಪ್ರಕ್ರಿಯೆಯೂ ನಡೆಯಲಿದೆ. ವೃದ್ಧಾಪ್ಯ ಮತ್ತು ವಿಧವಾ ವೇತನಕ್ಕೆ ಸಂಬಂಧಿಸಿದ ಆದಾಯ ಮಿತಿಯನ್ನು ಹೆಚ್ಚಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ನೆರವಾಗಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ. ದೇವನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಈ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೂ ಸುಮಾರು ೫೦ ಲಕ್ಷದಿಂದ ೧ ಕೋಟಿ ವರೆಗೆ ಅನುದಾನ ಬಳಸುವ ಉದ್ದೇಶವಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ನ್ಯಾಯಕ್ಕಾಗಿ ಸುದೀರ್ಘ ಕಾಲ ಹೋರಾಟ ನಡೆಸಿದ ಬಳಿಕ ನ್ಯಾಯಾಲಯದಲ್ಲಿ ನ್ಯಾಯ ದೊರೆತಿರುವುದು ಸಂತಸ ತಂದಿದೆ. ಸಾರ್ವಜನಿಕ ಸೇವೆ ಮಾಡಲು ದೊರೆತಿರುವ ಅವಕಾಶವನ್ನು ಜನರ ಹಿತಕ್ಕಾಗಿ ಬಳಸಿಕೊಳ್ಳುತ್ತೇನೆ ಎಂದರು.
ಈ ಭಾಗದ ಕೆರೆಗಳಿಗೆ ನೀರು ಹರಿಸುವುದು ರೈತರ ಪಾಲಿಗೆ ಅತ್ಯಂತ ಮಹತ್ವದ ಕಾರ್ಯವಾಗಿದೆ. ಹಿಂದೆ ನೀರಿಲ್ಲದೆ ಖಾಲಿಯಾಗಿದ್ದ ಕೆರೆಗಳಲ್ಲಿ ಇಂದು ನೀರು ತುಂಬಿರುವುದರಿಂದ ರೈತರ ತೋಟಗಳು, ಜಾನುವಾರುಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಅಭಿವೃದ್ಧಿ ಕಾರ್ಯಗಳು ಯಾವುದೇ ಒಂದು ಗ್ರಾಮದ ಅಥವಾ ಒಂದು ವರ್ಗದ ಜನರಿಗೆ ಮಾತ್ರ ಸೀಮಿತವಾಗಬಾರದು. ಎಲ್ಲ ಸಮುದಾಯಗಳನ್ನೂ ಪ್ರೀತಿಸಿ, ಸಮಾನವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಾಯಕತ್ವ ಅಗತ್ಯ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರು, ಬಡವರು ಹಾಗೂ ವಿವಿಧ ವರ್ಗಗಳ ಕುಟುಂಬಗಳಿಗೆ ನೆರವಾಗಿವೆ. ಜನರಿಗೆ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಮಾಹಿತಿ ಪಡೆದು, ಸಮಸ್ಯೆಗಳಿದ್ದರೆ ಅವುಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಕಾಫಿ, ಅಡಿಕೆ ಹಾಗೂ ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ನೀರಾವರಿ ವ್ಯವಸ್ಥೆ ಅಗತ್ಯ. ಶಾಶ್ವತವಾಗಿ ಜನರಿಗೆ ಅನುಕೂಲವಾಗುವ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದರು.
ಕೆ.ಬಿ. ಹಾಳ್ ಮತ್ತು ವಡ್ಡರಹಳ್ಳಿ ಕೆರೆಗಳಿಗೆ ಗಂಗೆ ಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ರೈತರು, ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಹಲವು ವರ್ಷಗಳಿಂದ ನೀರಿನ ಕೊರತೆಯನ್ನು ಎದುರಿಸುತ್ತಿದ್ದ ಕೆರೆಗಳಲ್ಲಿ ನೀರು ತುಂಬಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
‘Ganga Puja’ for the Vaddarahalli and K.B. Hal Lakes
Leave a comment