ಮೂಡಿಗೆರೆ: ಸರ್ಕಾರಿ ಗೋಮಾಳ ಭೂಮಿ ಒತ್ತುವರಿ ವಿವಾದವೊಂದು ಭುಗಿಲೆದ್ದಿದ್ದು, ತಾಲೂಕು ಆಡಳಿತ ಸೌಧದಲ್ಲಿ ಎರಡು ಗುಂಪುಗಳು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.
ತಾಲೂಕಿನ ತ್ರಿಪುರ ಗ್ರಾಮದ ಸರ್ವೇ ನಂಬರ್ 53ರಲ್ಲಿರುವ ಬರೋಬ್ಬರಿ 4 ಎಕರೆ ಸರ್ಕಾರಿ ಜಾಗವನ್ನು ಗ್ರಾಮದ ರತೀಶ್ ಎಂಬುವವರು ಅಕ್ರಮವಾಗಿ ಟ್ರಂಚ್ ಹೊಡೆದು, ಗಿಡ ನೆಟ್ಟು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು.
ಮಕ್ಕಳ ಶಾಲಾ ಆಟದ ಮೈದಾನ ಹಾಗೂ ಸಾರ್ವಜನಿಕ ಬಳಕೆಗೆ ಮೀಸಲಿದ್ದ ಜಾಗ ಅನ್ಯರ ಪಾಲಾಗುತ್ತಿದೆ ಎಂದು ಸಿಡಿದೆದ್ದ ಗ್ರಾಮಸ್ಥರ ಆಕ್ರೋಶಕ್ಕೆ ಸ್ಪಂದಿಸಿದ ತಹಶೀಲ್ದಾರ್ ಅಶ್ವಿನಿ, ಆರೋಪಿ ರತೀಶ್ ಅವರನ್ನು ಕಚೇರಿಗೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಒತ್ತುವರಿಯನ್ನು ತಕ್ಷಣ ತೆರವುಗೊಳಿಸಲು ಖಡಕ್ ಆದೇಶ ನೀಡಿದಾಗ, ತಾನೇ ಸ್ವತಃ ತೆರವು ಮಾಡುವುದಾಗಿ ಒಪ್ಪಿಕೊಂಡ ರತೀಶ್ ಎರಡು ದಿನಗಳ ಕಾಲಾವಕಾಶ ಕೇಳಿ ಮುಚ್ಚಳಿಕೆ ಪತ್ರ ಬರೆದುಕೊಟ್ಟರು.
ಆದರೆ, ಕಚೇರಿಯಿಂದ ಹೊರಬರುತ್ತಿದ್ದಂತೆಯೇ ಪರಿಸ್ಥಿತಿ ಕ್ಷಣಾರ್ಧದಲ್ಲಿ ರಣಾಂಗಣವಾಗಿ ಮಾರ್ಪಟ್ಟಿತು. ಎರಡೂ ಗುಂಪುಗಳ ನಡುವೆ ಜಗಳ ತಾರಕಕ್ಕೇರಿ ಮಾರಾಮಾರಿಗೆ ಮುಂದಾಗುತ್ತಿದ್ದಂತೆ, ಮೂಡಿಗೆರೆ ಪಿಎಸ್ಐ ಹರ್ಷವರ್ಧನ್ ತಕ್ಷಣ ಮಧ್ಯಪ್ರವೇಶಿಸಿ ಉದ್ರಿಕ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಗ್ರಾಮಸ್ಥರು ಜಾಗವನ್ನು ಸಾರ್ವಜನಿಕ ಹಿತಾಸಕ್ತಿಗೇ ಉಳಿಸಿಕೊಳ್ಳಲು ಪಟ್ಟುಹಿಡಿದಿದ್ದು ತಹಶೀಲ್ದಾರ್ ನೀಡಿದ ಗಡುವಿನಲ್ಲಿ ಗೋಮಾಳ ಜಾಗ ನಿಜಕ್ಕೂ ಒತ್ತುವರಿ ಮುಕ್ತವಾಗಲಿದೆಯೇ ಎಂಬ ಕುತೂಹಲ ಸ್ಥಳೀಯರಲ್ಲಿ ಮನೆಮಾಡಿದೆ.
Clash between two groups at the Mudigere Taluk Administrative Complex.
Leave a comment