ಚಿಕ್ಕಮಗಳೂರು: ಕರ್ನಾಟಕ ಸರ್ಕಾರವು ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಆವರ್ತನಾನುಸಾರ ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ನಿಯಮಗಳ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಕುರಿತು ವಿಶೇಷ ರಾಜ್ಯಪತ್ರ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಹೊರಡಿಸಲಾಗಿದ್ದ ಎಲ್ಲ ಅಧಿಸೂಚನೆಗಳನ್ನು ರದ್ದುಪಡಿಸಿ, ಹೊಸದಾಗಿ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಆಸಕ್ತರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಅ.19ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಕೆ
ಕರಡು ಮೀಸಲಾತಿ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು 2026ರ ಅಕ್ಟೋಬರ್ 19ರ ಸೋಮವಾರ ಸಂಜೆ 5 ಗಂಟೆಯೊಳಗೆ ಸೂಕ್ತ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು. ಆಕ್ಷೇಪಣೆಗಳನ್ನು ಸರ್ಕಾರದ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು–560001 ವಿಳಾಸಕ್ಕೆ ಸಲ್ಲಿಸಬಹುದಾಗಿದೆ.
ಆಕ್ಷೇಪಣೆಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿದೆ. ನಿಗದಿತ ದಿನಾಂಕದ ನಂತರ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಅಂಚೆ ವಿಳಂಬಕ್ಕೆ ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ತಾಲ್ಲೂಕುವಾರು ಕರಡು ಮೀಸಲಾತಿ ವಿವರ
ಶೃಂಗೇರಿ ತಾಲ್ಲೂಕು ಪಂಚಾಯಿತಿ
ಬೇಗಾರು, ಮೆಣಸೆ ಮತ್ತು ನೆಮ್ಮಾರು ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನಿಗದಿಪಡಿಸಲಾಗಿದೆ. ಅಡ್ಡಗದ್ದೆ ಕ್ಷೇತ್ರವು ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಾಗಿದೆ. ಋಷ್ಯಶೃಂಗಾಪುರ (ಮರ್ಕಲ್) ಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ, ಶೃಂಗೇರಿ ಗ್ರಾಮಾಂತರ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ ಹಾಗೂ 7ನೇ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ನೀಡಲಾಗಿದೆ.
ಕೊಪ್ಪ ತಾಲ್ಲೂಕು ಪಂಚಾಯಿತಿ
ಕೊಪ್ಪ ಗ್ರಾಮಾಂತರ, ಬಿಂತ್ರವಳ್ಳಿ ಮತ್ತು ಹೊನ್ನಗುಂಡಿ ಕ್ಷೇತ್ರಗಳು ಸಾಮಾನ್ಯ ಮೀಸಲಾತಿ ಹೊಂದಿವೆ. ಹರಿಹರಪುರ ಮತ್ತು ಹರಂದೂರು ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. ಚಾವಲ್ಮನೆ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ಹೇರೂರು ಕ್ಷೇತ್ರಕ್ಕೆ ಅನುಸೂಚಿತ ಜಾತಿ, ಜಯಪುರ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ ಹಾಗೂ ಗುಡ್ಡತೋಟ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ನಿಗದಿಯಾಗಿದೆ.
ನರಸಿಂಹರಾಜಪುರ ತಾಲ್ಲೂಕು ಪಂಚಾಯಿತಿ
ಮುತ್ತಿನಕೊಪ್ಪ, ಕಡಹಿನಬೈಲು ಮತ್ತು 5ನೇ ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನೀಡಲಾಗಿದೆ. ಸೀತೂರು ಮತ್ತು ಹೊನ್ನೇಕೊಡಿಗೆ ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. ಹರಾವರಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ಕರ್ಕೇಶ್ವರಕ್ಕೆ ಅನುಸೂಚಿತ ಜಾತಿ, ಬಿ.ಕಣಬೂರಿಗೆ ಅನುಸೂಚಿತ ಜಾತಿ ಮಹಿಳೆ ಹಾಗೂ ಮಾಗುಂಡಿಗೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ಕಲ್ಪಿಸಲಾಗಿದೆ.
ತರೀಕೆರೆ ತಾಲ್ಲೂಕು ಪಂಚಾಯಿತಿ
ಮುಡುಗೋಡು, ನಂದಿಬಟ್ಟಲು ಮತ್ತು ಲಿಂಗದಹಳ್ಳಿ ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಅಮೃತಾಪುರ, ಬಾವಿಕೆರೆ ಮತ್ತು ದೋರನಾಳು ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. ಕರಕುಚ್ಚಿ ಮತ್ತು ಲಕ್ಕವಳ್ಳಿ ಕ್ಷೇತ್ರಗಳಿಗೆ ಅನುಸೂಚಿತ ಜಾತಿ, ಕುಡೂರು ಮತ್ತು ಉಡೇವಾ ಕ್ಷೇತ್ರಗಳಿಗೆ ಅನುಸೂಚಿತ ಜಾತಿ ಮಹಿಳೆ ಹಾಗೂ ಬೇಲೇನಹಳ್ಳಿ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ನೀಡಲಾಗಿದೆ.
ಕಳಸ ತಾಲ್ಲೂಕು ಪಂಚಾಯಿತಿ
ಸಂಸೆ, ಹೊರನಾಡು ಮತ್ತು ಇಡಕಣಿ ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನಿಗದಿಪಡಿಸಲಾಗಿದೆ. ಮರಸಣಿಗೆ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹೆಮ್ಮಕ್ಕಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ತನೂಡಿ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ ಹಾಗೂ ಮಾವಿನಕರೆ (ಕಳಸ) ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ನೀಡಲಾಗಿದೆ.
ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ
ದೇವದಾನ, ಮೂಗ್ತಿಹಳ್ಳಿ, ಕರ್ತಿಕೆರೆ, 14ನೇ ಕ್ಷೇತ್ರ ಮತ್ತು ವಸ್ತಾರೆ ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನೀಡಲಾಗಿದೆ. ಬಿಂಡಿಗಾ, ದೊಡ್ಡಮಾಗರವಳ್ಳಿ, 10ನೇ ಕ್ಷೇತ್ರ, ಕಳಸಾಪುರ ಮತ್ತು ಆಲೂರು ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ.
ಬಿಳೇಕಲ್ಲಹಳ್ಳಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಹಾಗೂ ಬೆಳವಾಡಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ ಮೀಸಲಾತಿ ನಿಗದಿಯಾಗಿದೆ. ಹಿರೇಕೊಳಲೆ, ಅಲ್ಲಂಪುರ ಮತ್ತು ಅಂಬಳೆ ಕ್ಷೇತ್ರಗಳಿಗೆ ಅನುಸೂಚಿತ ಜಾತಿ ಮೀಸಲಾತಿ ನೀಡಲಾಗಿದೆ. ಶಿರವಾಸೆ, ಬ್ಯಾರವಳ್ಳಿ ಮತ್ತು 17ನೇ ಕ್ಷೇತ್ರಗಳು ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿವೆ. ಮಾಚಗೊಂಡನಹಳ್ಳಿ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ಕಲ್ಪಿಸಲಾಗಿದೆ.
ಅಜ್ಜಂಪುರ ತಾಲ್ಲೂಕು ಪಂಚಾಯಿತಿ
ಬುಕ್ಕಾಂಬುದಿ, ಶಿವನಿ ಮತ್ತು ಗಡಿಹಳ್ಳಿ ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನೀಡಲಾಗಿದೆ. ಸೊಲ್ಲಾಪುರ ಮತ್ತು ಸೊಕ್ಕೆ ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. ಜಾವೂರು ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ಭಕ್ತನಕಟ್ಟೆಗೆ ಅನುಸೂಚಿತ ಜಾತಿ, ಬಗ್ಗವಳ್ಳಿಗೆ ಅನುಸೂಚಿತ ಜಾತಿ ಮಹಿಳೆ ಹಾಗೂ ಮುಗುಳಿಗೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ನಿಗದಿಪಡಿಸಲಾಗಿದೆ.
ಕಡೂರು ತಾಲ್ಲೂಕು ಪಂಚಾಯಿತಿ
ಹೋಚಿಹಳ್ಳಿ, ಬಳ್ಳಿಗನೂರು, ದೊಡ್ಡಪಟ್ಟಣಗೆರೆ, ಕುಂಕಾನಾಡು, ಕೆ.ಬಿದರೆ ಮತ್ತು ಜಿಗಣೇಹಳ್ಳಿ ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನೀಡಲಾಗಿದೆ. ಹಿರೇನಲ್ಲೂರು, ಚೌಳಹಿರಿಯೂರು, ಯಳ್ಳಂಬಳಸೆ ಮತ್ತು ಪಂಚನಹಳ್ಳಿ ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ.
ಬಿಸಲೆರೆ ಮತ್ತು ಯಗಟಿ ಕ್ಷೇತ್ರಗಳಿಗೆ ಹಿಂದುಳಿದ ವರ್ಗ ‘ಅ’ ಮೀಸಲಾತಿ ನೀಡಲಾಗಿದೆ. ದೇವನೂರು ಮತ್ತು ಎಸ್.ಬಿದರೆ ಕ್ಷೇತ್ರಗಳು ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಾಗಿವೆ. ಮತಿಘಟ್ಟ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಬಿ’ ಮಹಿಳೆ ಮೀಸಲಾತಿ ನಿಗದಿಯಾಗಿದೆ.
ಬಳ್ಳೇಕೆರೆ ಮತ್ತು ಸಖರಾಯಪಟ್ಟಣ ಕ್ಷೇತ್ರಗಳಿಗೆ ಅನುಸೂಚಿತ ಜಾತಿ ಮೀಸಲಾತಿ ನೀಡಲಾಗಿದೆ. ಎಮ್ಮೆದೊಡ್ಡಿ ಮತ್ತು ಮಲ್ಲೇಶ್ವರ ಕ್ಷೇತ್ರಗಳು ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿವೆ. ಸಿಂಗಟಗೆರೆ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ಕಲ್ಪಿಸಲಾಗಿದೆ.
ಮೂಡಿಗೆರೆ ತಾಲ್ಲೂಕು ಪಂಚಾಯಿತಿ
ಬಿಳಗುಳ, ಮೂಡಿಗೆರೆ ಗ್ರಾಮಾಂತರ (ಕಸಬಾ) ಮತ್ತು ದಾರದಹಳ್ಳಿ ಕ್ಷೇತ್ರಗಳಿಗೆ ಸಾಮಾನ್ಯ ಮೀಸಲಾತಿ ನಿಗದಿಪಡಿಸಲಾಗಿದೆ. ಜಾವಳಿ ಮತ್ತು ಬಿದರಹಳ್ಳಿ ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. ನಿಡುವಾಳೆ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮೀಸಲಾತಿ ನೀಡಲಾಗಿದೆ. ಬಣಕಲ್ ಮತ್ತು ಚಿನ್ನಿಗ ಕ್ಷೇತ್ರಗಳು ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿವೆ. ಗೋಣಿಬೀಡು ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಮೀಸಲಾತಿ ಕಲ್ಪಿಸಲಾಗಿದೆ.
ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಅಂತಿಮ ಪಟ್ಟಿ
ಸರ್ಕಾರ ಪ್ರಕಟಿಸಿರುವುದು ಕರಡು ಮೀಸಲಾತಿ ಪಟ್ಟಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಮತ್ತು ಅಗತ್ಯ ದಾಖಲೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬಹುದಾಗಿದೆ. ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಕ್ಷೇತ್ರಗಳ ಮೀಸಲಾತಿ ಕುರಿತು ಆಕ್ಷೇಪಣೆಗಳಿದ್ದವರು ಅಕ್ಟೋಬರ್ 19ರ ಸಂಜೆ 5 ಗಂಟೆಯ ಗಡುವಿನೊಳಗೆ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ.
Draft reservation list of taluk panchayat constituencies of Chikmagalur district published
Leave a comment