Home namma chikmagalur chikamagalur ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ
chikamagalurHomeLatest Newsnamma chikmagalur

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಒಂದು ಕಡೆ ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಕೊಳವೆಬಾವಿಗಳಿಂದ ಲಭ್ಯವಾಗುವ ಅಲ್ಪಸ್ವಲ್ಪ ನೀರಿನಿಂದಲೂ ಬೆಳೆಗಳನ್ನು ಉಳಿಸಿಕೊಳ್ಳುವ ರೈತರ ಪ್ರಯತ್ನ ವಿಫಲವಾಗುತ್ತಿದೆ ಎಂದು ರವಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರದ ನಿಯಮದಂತೆ ರೈತರ ಬೋರ್‌ವೆಲ್‌ಗಳಿಗೆ 6 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರಾತ್ರಿ ವೇಳೆ ನಿಗದಿತ ಮೂರು ಗಂಟೆಗಳ ಬದಲು ಕೇವಲ ಒಂದು ಗಂಟೆ ವಿದ್ಯುತ್ ದೊರೆಯುತ್ತಿದ್ದು, ಕೆಲವು ದಿನಗಳಲ್ಲಿ ಅದೂ ಸಹ ಇರುವುದಿಲ್ಲ ಎಂಬುದು ರೈತರ ಅಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ವಿದ್ಯುತ್ ಪೂರೈಕೆಯ ಪ್ರಮಾಣದಲ್ಲಿ ಯಾವುದೇ ಕಡಿತ ಮಾಡಿಲ್ಲ; ಮೇಲಿನಿಂದ ಎಷ್ಟು ವಿದ್ಯುತ್ ಪೂರೈಕೆಯಾಗುತ್ತಿದೆಯೋ ಅಷ್ಟನ್ನೇ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ನೆಲಮಟ್ಟದಲ್ಲಿ ರೈತರಿಗೆ ಎದುರಾಗುತ್ತಿರುವ ಸಮಸ್ಯೆ ಇದಕ್ಕೆ ವ್ಯತಿರಿಕ್ತವಾಗಿದೆ ಎಂದು ರವಿ ಅವರು ಹೇಳಿದ್ದಾರೆ.

ಪಂಪ್‌ಸೆಟ್‌ಗಳಿಗೆ 3 ಫೇಸ್ ವಿದ್ಯುತ್ ಪೂರೈಕೆಗೆ ಆಗ್ರಹ

ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರ ನಿಗದಿಪಡಿಸಿರುವಂತೆ ಗುಣಮಟ್ಟದ ಹಾಗೂ ನಿಯಮಿತ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅನಿಯಮಿತತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ರವಿ ಅವರು ಸಚಿವರಿಗೆ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ, ಬಿಳೇಕಲ್ಲಹಳ್ಳಿ, ಹಿರೇಗೌಜ ಹಾಗೂ ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವೋಲ್ಟೇಜ್ ಸಮಸ್ಯೆ ತೀವ್ರವಾಗಿದೆ. ಈ ಪ್ರದೇಶಗಳಲ್ಲಿನ ಕಡಿಮೆ ವೋಲ್ಟೇಜ್ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ರವಿ ಅವರು ಒತ್ತಾಯಿಸಿದ್ದಾರೆ.

ಲಕ್ಯಾ ಹೋಬಳಿಯ ವಿದ್ಯುತ್ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗಾಣದಾಳು ಎಂ.ಯು.ಎಸ್.ಎಸ್. ವಿದ್ಯುತ್ ಉಪಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದು ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ಈ ಉಪಕೇಂದ್ರವನ್ನು ತಕ್ಷಣ ಕಾರ್ಯಾರಂಭಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇದರಿಂದ ಲಕ್ಯಾ ಹೋಬಳಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯುವುದರ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಿಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗಲಿದೆ ಎಂದು ರವಿ ಅವರು ತಿಳಿಸಿದ್ದಾರೆ.

ಟ್ರಾನ್ಸ್‌ಫಾರ್ಮರ್ ಬದಲಾವಣೆಗೆ ವಾರಗಟ್ಟಲೆ ಕಾಯುವ ಪರಿಸ್ಥಿತಿ

ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋದ ಸಂದರ್ಭದಲ್ಲಿ ಸರ್ಕಾರದ ಸೂಚನೆಯಂತೆ 24 ಗಂಟೆಗಳೊಳಗೆ ಅವುಗಳನ್ನು ಬದಲಾಯಿಸಿ ವಿದ್ಯುತ್ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಆದರೆ ವಾಸ್ತವವಾಗಿ ಕ್ಷೇತ್ರದಲ್ಲಿ ಟ್ರಾನ್ಸ್‌ಫಾರ್ಮರ್ ಬದಲಾಯಿಸಲು ವಾರಗಟ್ಟಲೆ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದು ರವಿ ಅವರು ಆರೋಪಿಸಿದ್ದಾರೆ.

ವಿಶೇಷವಾಗಿ ಕಡೂರು ತಾಲೂಕಿನಲ್ಲಿ ಈ ಸಮಸ್ಯೆ ಹೆಚ್ಚಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರೈತರು ಹಾಗೂ ಗ್ರಾಮೀಣ ಪ್ರದೇಶದ ಜನರು ವಿದ್ಯುತ್ ಸಂಪರ್ಕಕ್ಕಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ, ಟ್ರಾನ್ಸ್‌ಫಾರ್ಮರ್ ಬದಲಾವಣೆ ವ್ಯವಸ್ಥೆಯನ್ನು ತ್ವರಿತಗೊಳಿಸುವಂತೆ ಸಚಿವರನ್ನು ಒತ್ತಾಯಿಸಿದ್ದಾರೆ.

ಓವರ್‌ಲೋಡ್ ಟ್ರಾನ್ಸ್‌ಫಾರ್ಮರ್‌ಗಳ ಸಾಮರ್ಥ್ಯ ಹೆಚ್ಚಿಸಿ

ಅತಿಯಾದ ವಿದ್ಯುತ್ ಲೋಡ್‌ನಿಂದಾಗಿ ಹಲವು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗುತ್ತಿರುವ ಸಾಧ್ಯತೆಯಿದ್ದು, ಓವರ್‌ಲೋಡ್ ಆಗಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ಗಳಿಂದ ಬದಲಾಯಿಸಬೇಕು. ಇಲ್ಲವೇ ಈಗಿರುವ ಟ್ರಾನ್ಸ್‌ಫಾರ್ಮರ್‌ಗಳ ಜೊತೆಗೆ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ರವಿ ಅವರು ಸಲಹೆ ನೀಡಿದ್ದಾರೆ.

ಇದು ಇಲಾಖೆಯ ಕರ್ತವ್ಯವಾಗಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದೇ ಟ್ರಾನ್ಸ್‌ಫಾರ್ಮರ್‌ಗಳು ಪದೇಪದೇ ಸುಟ್ಟುಹೋಗಲು ಪ್ರಮುಖ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಓವರ್‌ಲೋಡ್ ಇರುವ ಪ್ರದೇಶಗಳನ್ನು ಗುರುತಿಸಿ ಹೆಚ್ಚುವರಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಳವಾಡಿ ಬಳಿ ಹೊಸ ಎಂ.ಯು.ಎಸ್.ಎಸ್. ಸ್ಥಾಪನೆಗೆ ಮನವಿ

ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದ ಸಮೀಪ ಹೊಸ ಎಂ.ಯು.ಎಸ್.ಎಸ್. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಿದರೆ, ಆ ಭಾಗದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ ಕಳಸಾಪುರ ಎಂ.ಯು.ಎಸ್.ಎಸ್. ಮೇಲಿರುವ ಒತ್ತಡವನ್ನು ಕಡಿಮೆ ಮಾಡಬಹುದು. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಬೆಳವಾಡಿ ಗ್ರಾಮದ ಸಮೀಪ ಹೊಸ ಎಂ.ಯು.ಎಸ್.ಎಸ್. ಸ್ಟೇಷನ್‌ಗೆ ಮಂಜೂರಾತಿ ನೀಡುವಂತೆ ಸಚಿವ ಕೆ.ಜೆ. ಜಾರ್ಜ್ ಅವರನ್ನು ಅವರು ಮನವಿ ಮಾಡಿದ್ದಾರೆ.

ಮಳೆ ಕೊರತೆಯಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದಿದ್ದರೆ ರೈತರ ಬೆಳೆಗಳನ್ನು ಉಳಿಸಿಕೊಳ್ಳುವುದು ಮತ್ತಷ್ಟು ಕಷ್ಟವಾಗುತ್ತದೆ. ಆದ್ದರಿಂದ ರೈತರ ವಿದ್ಯುತ್ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಿ, ನಿಗದಿತ ಪ್ರಮಾಣದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರವಿ ಅವರು ಸಚಿವರಿಗೆ ಮನವಿ ಮಾಡಿದ್ದಾರೆ.

Appeal to Energy Minister to resolve electricity issues in Lakya-Sakharayapatna Hobli.

Share

Leave a comment

Leave a Reply

Your email address will not be published. Required fields are marked *

Don't Miss

ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾರಾಮಾರಿ

ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯೊಂದು ನೋಡನೋಡುತ್ತಿದ್ದಂತೆ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಭೆಯಲ್ಲಿ...

ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಪ್ರತಿಷ್ಠಾಪನೆ ಉತ್ಸವಗಳು ನಡೆದವು. ಬೋಳರಾಮೇಶ್ವರ ದೇವಸ್ಥಾನದದ ಆವರಣದಲ್ಲಿ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಿಂದ(ಅಜಾದ್ ಮೈದಾನ), ಹಿಂದೂ ಮಹಾಗಣಪತಿ ಸೇವಾ ಸಂಘದ...

Related Articles

ಜಿಲ್ಲೆಯ ಐದು ಜನ ಶಾಸಕರಿಗೆ ಬೊಗಣಿ ಗೂಟ ಖಚಿತ !?

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು...

ಕಲಿಕೆ ವಯಸ್ಸಿನಲ್ಲಿ ವ್ಯಾಮೋಹಕ್ಕೆ ಒಳಗಾಗದಿರಿ

ಚಿಕ್ಕಮಗಳೂರು: ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ಇಂದಿನ ಯುವಪೀಳಿಗೆ ಬಹಳ ಷ್ಟು ಎಚ್ಚರಿಕೆ ವಹಿಸಬೇಕು. ಕಲಿಕೆಯಲ್ಲಿ ಹೊರತಾಗಿ...

ಭೋವಿ ಜಾತಿ ಪ್ರಮಾಣಪತ್ರ ನೀಡಲು ವಿಳಂಬ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಡ್ಡರ ಸಮುದಾಯದವರಿಗೆ ಭೋವಿ ಜಾತಿ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳು ಅನಗತ್ಯ ತೊಂದರೆ...

ಬಿರಂಜಿ ಹೊಳೆಯಿಂದ ರೈತಾಪಿ ವರ್ಗದ ಬೃಹತ್ ಪಾದಯಾತ್ರೆ

ಚಿಕ್ಕಮಗಳೂರು:  ಜಾವಣಿಗೆ ನಾಡಿನ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ವಿಫಲಗೊ ಂಡಿರುವ ಸರ್ಕಾರದ ಆಡಳಿತ ವ್ಯವಸ್ಥೆ...