ಚಿಕ್ಕಮಗಳೂರು: ಸರ್ಕಾರದ ಯೋಜನೆಗಳು ಮತ್ತು ಸವಲತ್ತುಗಳು ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು. ಅಧಿಕಾರಿಗಳು ಕಾಟಾಚಾರಕ್ಕೆ ಸಭೆ ನಡೆಸದೆ ಸಾರ್ವಜನಿಕರ ಕುಂದುಕೊರತೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸೂಚಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಗ್ರಾಮದ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಪ್ರಜಾ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜನರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರವೇ ಅಧಿಕಾರಿಗಳ ತಂಡವನ್ನು ಮನೆಬಾಗಿಲಿಗೆ ಕಳುಹಿಸಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ವಿನೂತನ ವ್ಯವಸ್ಥೆ ತಂದಿದೆ. ಶಾಸಕಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಉದ್ದೇಶ ಈಡೇರಲು ಸಾಧ್ಯ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ವಿಧಿಸಲಾಗಿದ್ದ ಕೆಲ ಕಠಿಣ ನಿಯಮಗಳಿಂದಾಗಿ ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ನಿಂತುಹೋಗಿತ್ತು. ವಾರ್ಷಿಕ ಆದಾಯ ಮಿತಿ ರೂ.೩೨ ಸಾವಿರ ಇದ್ದುದನ್ನು ಈಗ ಶಾಸಕರ ಒತ್ತಾಯದ ಮೇರೆಗೆ ರೂ.೧.೨೦ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಲಕ್ಯಾ ಹೋಬಳಿಯೊಂದರಲ್ಲೇ ೨,೪೦೦ಕ್ಕೂ ಹೆಚ್ಚು ಅರ್ಹರು ಇದರಿಂದ ವಂಚಿತರಾಗಿದ್ದರು. ಈಗಾಗಲೇ ೬೦೦ ಜನರ ದಾಖಲೆ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ವಾರದಲ್ಲಿ ಅವರ ಖಾತೆಗೆ ಹಣ ಜಮೆಯಾಗಲಿದೆ. ಉಳಿದ ೧,೮೦೦ ಫಲಾನುಭವಿಗಳ ಮನೆಬಾಗಿಲಿಗೆ ಕಂದಾಯ ಅಧಿಕಾರಿಗಳು ಆಗಮಿಸಿ ದಾಖಲೆ ಪಡೆಯಲಿದ್ದು, ತಾಲ್ಲೂಕು ಕಚೇರಿಗೆ ಅಲೆಯುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ಲಕ್ಯಾ ಹೋಬಳಿಯ ೧೦ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಚೆಕ್ ಡ್ಯಾಂ ಸೇರಿದಂತೆ ಒಟ್ಟು ರೂ.೩,೦೯೭ ಲಕ್ಷ (೩೦.೯೭ ಕೋಟಿ) ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಜತೆಗೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು. ರೈತರಿಗೆ ಕನಿಷ್ಠ ೬ ಗಂಟೆ ತ್ರಿಫೇಸ್ ವಿದ್ಯುತ್ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಕಣಿವೆಹಳ್ಳಿ ಹಾಗೂ ಕಳಸಾಪುರ ಭಾಗದಲ್ಲಿನ ಅಡೆತಡೆಗಳು ಮುಗಿದಿದ್ದು, ಗಾಣದಾಳು ಉಪಕೇಂದ್ರ ಇನ್ನು ೧೦ ದಿನಗಳಲ್ಲಿ ಚಾರ್ಜ್ ಆಗಲಿದೆ. ಇದರಿಂದ ಲಕ್ಯಾ ಹೋಬಳಿಯ ಸುದೀರ್ಘ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಕೇಂದ್ರ ಸರ್ಕಾರದ ಬರ ಘೋಷಣೆಯ ಮಾನದಂಡಗಳು ಸೂಕ್ತವಾಗಿಲ್ಲ. ತಾಲ್ಲೂಕು ಮಟ್ಟದ ಬದಲಿಗೆ ಹೋಬಳಿವಾರು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಚಿಕ್ಕಮಗಳೂರು ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಮಳೆಯಾಗಿದ್ದರೂ ಲಕ್ಯಾ ಹಾಗೂ ಅಂಬಳೆ, ಕಸಬಾದ ಕೆಲವು ಹೋಬಳಿಗಳು ತೀವ್ರ ಬರ ಎದುರಿಸುತ್ತಿವೆ. ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಬಾಕಿ ಇರುವ ರಾಗಿ ಬೆಳೆಗಾರರ ಪ್ರೋತ್ಸಾಹಧನವನ್ನು ವಾರದಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಬಾಗಿಲಿಗೆ ಬಂದಿರುವ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಜನರು ತಹಶೀಲ್ದಾರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ‘ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ತತ್ವದಡಿ ಆಡಳಿತವನ್ನು ಹಳ್ಳಿಗಳಿಗೆ ತಂದಿದೆ. ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ, ಪರಿಹಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಚಿಕ್ಕಮಗಳೂರು ಎಂದರೆ ಕೇವಲ ಕಾಫಿ, ಮೆಣಸು, ಅಡಿಕೆ ಬೆಳೆಯುವ ಸಮೃದ್ಧ ಮಲೆನಾಡು ಎಂದಷ್ಟೇ ಭಾವಿಸಲಾಗುತ್ತದೆ. ಆದರೆ ಲಕ್ಯಾ ಹಾಗೂ ಸುತ್ತಮುತ್ತಲ ಭಾಗಗಳು ಅರೆಮಲೆನಾಡು ಪ್ರದೇಶಗಳಾಗಿದ್ದು, ಇಲ್ಲಿನ ರೈತರು ರಾಗಿ, ಹುರುಳಿ ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಮಳೆ ಅಭಾವದಿಂದಾಗಿ ಈ ಭಾಗದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಈ ಕುರಿತು ಸದನದಲ್ಲೂ ಧ್ವನಿ ಎತ್ತಲಾಗಿದ್ದು, ಶಾಶ್ವತ ನೀರಾವರಿ ಯೋಜನೆಗಳ ಮೂಲಕ ನೀರು ಒದಗಿಸಲು ಸರ್ಕಾರ ಮತ್ತು ಶಾಸಕರು ಶ್ರಮಿಸಬೇಕಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಾದ ಉಚಿತ ವಿದ್ಯುತ್, ಗೃಹಲಕ್ಷ್ಮೀ, ಶಕ್ತಿ ಯೋಜನೆ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳು ಸಾಮಾನ್ಯ ಜನರ ಜೀವನಕ್ಕೆ ದೊಡ್ಡ ಆಸರೆಯಾಗಿವೆ. ಅರ್ಹ ಫಲಾನುಭವಿಗಳು ಈ ಸೌಲಭ್ಯಗಳ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಸರ್ಕಾರದ ಯೋಜನೆಗಳು ಹಾಗೂ ಅನುದಾನಗಳು ಸದುಪಯೋಗವಾಗಬೇಕಾದರೆ ಸ್ಥಳೀಯ ಜನರ ಅಗತ್ಯತೆ, ಆಶೋತ್ತರಗಳು ಹಾಗೂ ಭಾವನೆಗಳನ್ನು ಗ್ರಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ‘ಪ್ರಜಾಸೇವಾ’ ಕಾರ್ಯಕ್ರಮವು ಆಡಳಿತವನ್ನು ನೇರವಾಗಿ ಜನರ ಬಾಗಿಲಿಗೆ ತಲುಪಿಸುವ ಪ್ರಮುಖ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಚೇರಿಯಲ್ಲಿಯೇ ಕುಳಿತು ನಿರ್ಧಾರಗಳನ್ನು ತೆಗೆದುಕೊಂಡರೆ ಜನರ ನೈಜ ಸಮಸ್ಯೆಗಳು ಆಡಳಿತಕ್ಕೆ ತಲುಪುವುದಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೂಪಿಸುವ ಕ್ರಿಯಾ ಯೋಜನೆಗಳು ಜನರ ಅಪೇಕ್ಷೆಗೆ ತಕ್ಕಂತೆ ಇರಬೇಕು. ಸಾರ್ವಜನಿಕರ ವ್ಯಕ್ತಿಗತ ಹಾಗೂ ಸಾಮುದಾಯಿಕ ಸಮಸ್ಯೆಗಳನ್ನು ಖುದ್ದಾಗಿ ಗ್ರಹಿಸಿ ಪರಿಹರಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡವೇ ಈ ಕಾರ್ಯಕ್ರಮದ ಮೂಲಕ ನಿಮ್ಮ ಬಳಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಮೂರು ವಿಭಾಗಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದ ಅವರು, ಸ್ಥಳದಲ್ಲೇ ಅಥವಾ ಒಂದು ವಾರದೊಳಗೆ ಇತ್ಯರ್ಥಪಡಿಸಬಹುದಾದ ಅರ್ಜಿಗಳನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ರಸ್ತೆ ನಿರ್ಮಾಣದಂತಹ ಮೂಲ ಸೌಕರ್ಯದ ಬೇಡಿಕೆಗಳನ್ನು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಇಂಟರ್‌ಮೀಡಿಯೇಟ್ ಹಂತದಲ್ಲಿ ವಿಲೇವಾರಿ ಮಾಡಲಾಗುವುದು. ಇನ್ನು ನೀತಿ ನಿಯಮಾವಳಿ ಹಾಗೂ ಸರ್ಕಾರಿ ಹಂತದ ನಿರ್ಧಾರಗಳಿಗೆ ಸಂಬಂಧಿಸಿದ ವಿಷಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಕಾರ್ಯದರ್ಶಿಗಳ ಗಮನಕ್ಕೆ ತಂದು ಪರಿಹರಿಸಲು ಶ್ರಮಿಸಲಾಗುವುದು ಎಂದರು.
ಪ್ರತಿ ಶನಿವಾರ ನಡೆಯುವ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪ್ರಗತಿಯನ್ನು ಪ್ರತಿ ಬುಧವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಸಿ ಇಲಾಖಾವಾರು ಪರಿಶೀಲಿಸಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮಒನ್ ಮೂಲಕ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ ಜಿಆರೆಸ್ ಐಪಿ ಸಂಖ್ಯೆ ನೀಡಲಾಗುತ್ತಿದ್ದು, ಅರ್ಜಿಗಳ ಸ್ಥಿತಿಗತಿಯನ್ನು ನಿರಂತರವಾಗಿ ಟ್ರ್ಯಾಕ್ ಮಾಡಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ತಹಶೀಲ್ದಾರ್ ರೇಷ್ಮಾಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ‘ಪ್ರಜಾ ಸೇವಾ’ ಯೋಜನೆಯು ಸಾರ್ವಜನಿಕರಿಗೆ ತಲುಪುತ್ತಿದ್ದು, ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಲಾಗುವುದು ಎಂದರು.
ಲಕ್ಯಾ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೩೦೦ ಜನರಿಗೆ ಪೋಡಿ ಮಾಡಿಕೊಡಲು ಅನುಮೋದನೆ ನೀಡಲಾಗಿದ್ದು, ಇದು ನಿರಂತರವಾಗಿ ನಡೆಯಲಿದೆ. ಉಳಿದಂತೆ ಸಂಕೀರ್ಣ ಸಮಸ್ಯೆಗಳನ್ನೂ ಶೀಘ್ರವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಸರ್ಕಾರವು ಪಿಂಚಣಿ ಯೋಜನೆಯ ಆದಾಯ ಮಿತಿಯನ್ನು ರೂ.೧.೨೦ ಲಕ್ಷಕ್ಕೆ ಹೆಚ್ಚಿಸಿದ ನಂತರ ಲಕ್ಯಾ ಹೋಬಳಿಯಲ್ಲೇ ಸುಮಾರು ೨,೦೦೦ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಿಲ್ಲೆಯಲ್ಲಿ ಒಟ್ಟು ೧೩,೦೦೦ ಅರ್ಜಿಗಳಿದ್ದು, ಚುನಾವಣಾ ಕೆಲಸಗಳ ಕಾರಣದಿಂದ ವಿಲೇವಾರಿ ತುಸು ವಿಳಂಬವಾಗಿತ್ತು. ಆದರೂ ಲಕ್ಯಾ ಹೋಬಳಿಯೊಂದರಲ್ಲೇ ಈಗಾಗಲೇ ೭೦೦ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ ಅರ್ಜಿಗಳನ್ನು ಪ್ರತಿ ಬುಧವಾರ ಪರಿಶೀಲಿಸಿ ಶೀಘ್ರದಲ್ಲೇ ವಿಲೇವಾರಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಸ್ವೀಕರಿಸಲಾದ ೩೦ಕ್ಕೂ ಹೆಚ್ಚು ಅರ್ಜಿಗಳನ್ನು ಶಾಸಕರು ಸಾರ್ವಜನಿಕರ ಸಮ್ಮುಖದಲ್ಲೇ ಪರಿಶೀಲಿಸಿ ಸೂಕ್ತ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಹೆಚ್.ಎಸ್.ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ, ತಾಲ್ಲೂಕು ಪಂಚಾಯಿತಿ ಇಒ ವಿಜಯಕುಮಾರ್, ಬಗರ್ ಹುಕುಂ ಸಮಿತಿ ಸದಸ್ಯರಾದ ಕೆಂಗೇಗೌಡ, ಶಂಕರ್ ನಾಯಕ್, ಕೆಡಿಪಿ ಸದಸ್ಯ ಸಂತೋಷ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Respond to public grievances—let the meeting not be merely a formality.
Leave a comment