Home ಕಸಾಪ ಅಧ್ಯಕ್ಷಗಿರಿಗೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ
HomeLatest Newsnamma chikmagalur

ಕಸಾಪ ಅಧ್ಯಕ್ಷಗಿರಿಗೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ

Share
Share

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಸರ್ಕಾರ ಚುನಾವಣಾಧಿಕಾರಿಯನ್ನು ನೇಮಕ ಮಾಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡಿದ್ದು, ಚುನಾವಣಾ ದಿನಾಂಕ ಘೋಷಣೆಯಷ್ಟೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಹಿತಿ ಹಾಗೂ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು, ದೊಡ್ಡ ಪರಂಪರೆಯುಳ್ಳ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೂ ಮಹಿಳೆಯೊಬ್ಬರು ಅಧ್ಯಕ್ಷರಾಗಿಲ್ಲ. ಈ ಬಾರಿ ಮಹಿಳೆಗೆ ಅವಕಾಶ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಡಾ. ಸಿ. ಸೋಮಶೇಖರ್ ಅವರು ಅಧ್ಯಕ್ಷ ಸ್ಥಾನ ಅಧಿಕಾರ ಅನುಭವಿಸುವ ಸ್ಥಾನವಲ್ಲ, ಸೇವೆ ಸಲ್ಲಿಸುವ ಅವಕಾಶವಾಗಿದ್ದು, ಈ ಸ್ಥಾನಕ್ಕೆ ತಾವೇ ಸೂಕ್ತರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಇಬ್ಬರ ನಡುವೆ ಜಾಣಗೆರೆ ವೆಂಕಟರಾಮಯ್ಯ ಅವರ ಸಾಹಿತ್ಯ ಮತ್ತು ಕನ್ನಡಪರ ಸೇವೆಯನ್ನು ಪರಿಗಣಿಸಿದರೆ, ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅವರೇ ಹೆಚ್ಚು ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಲೇಖಕ, ಕಿರುತೆರೆ-ಹಿರಿತೆರೆ ನಿರ್ದೇಶಕ ಹಾಗೂ ಕನ್ನಡಪರ ಚಿಂತಕ ಹಿರಿಯೂರು ರಾಘವೇಂದ್ರ.

ಜಾಣಗೆರೆ ವೆಂಕಟರಾಮಯ್ಯ ಅವರು ಕತೆ, ಕಾದಂಬರಿ, ವ್ಯಕ್ತಿಚಿತ್ರ ಹಾಗೂ ಆತ್ಮಕಥೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ಪತ್ರಕರ್ತರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿರುವ ಅವರು, ಕನ್ನಡ ಭಾಷೆ ಹಾಗೂ ಸಮಾಜದ ಹಿತಕ್ಕಾಗಿ ನಿರಂತರವಾಗಿ ದುಡಿದಿದ್ದಾರೆ.

ವಿಶೇಷವಾಗಿ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕನ್ನಡ ಭಾಷೆ, ನೆಲ-ಜಲ ಹಾಗೂ ಕನ್ನಡಿಗರ ಹಕ್ಕುಗಳ ಪರ ಧ್ವನಿ ಎತ್ತಿರುವುದು ಅವರ ಪ್ರಮುಖ ವೈಶಿಷ್ಟ್ಯವಾಗಿದೆ. ಯಾವುದೇ ಆಮಿಷಗಳಿಗೆ ತಮ್ಮ ಧ್ಯೇಯ ಮತ್ತು ನಿಷ್ಠೆಯನ್ನು ಬದಲಿಸದೆ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಾಣಗೆರೆ ವೆಂಕಟರಾಮಯ್ಯ ಅವರ ಬದುಕಿನ ಕೇಂದ್ರಬಿಂದು ಕನ್ನಡವೇ ಆಗಿದೆ ಎಂದು ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.

‘ಕನ್ನಡವೇ ಬದುಕು, ಕನ್ನಡವೇ ಉಸಿರು’ ಎಂಬ ಧ್ಯೇಯದೊಂದಿಗೆ ಬದುಕುತ್ತಿರುವ ಜಾಣಗೆರೆ ವೆಂಕಟರಾಮಯ್ಯ ಅವರು ಕಸಾಪದ ಮೂಲ ಉದ್ದೇಶಗಳಿಗೆ ಹೆಚ್ಚು ಹತ್ತಿರವಾಗಿರುವ ವ್ಯಕ್ತಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವು ಕೇವಲ ಅಧಿಕಾರದ ಸ್ಥಾನವಲ್ಲ; ಕನ್ನಡ ಭಾಷೆ ಮತ್ತು ಸಾಹಿತ್ಯದ ಸೇವೆಗೆ ದೊರೆಯುವ ಮಹತ್ವದ ಜವಾಬ್ದಾರಿ. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತಿರುವ ವ್ಯಕ್ತಿಗೆ ಅವಕಾಶ ದೊರೆಯಬೇಕು ಎಂಬುದು ತಮ್ಮ ಆಶಯ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕನ್ನಡದತ್ತ ಒಲವು ತೋರುವುದಕ್ಕಿಂತ, ಬದುಕಿನುದ್ದಕ್ಕೂ ಕನ್ನಡಿಗರೊಂದಿಗೆ ಬೆರೆತು, ಕನ್ನಡಕ್ಕಾಗಿ ಹೋರಾಟ ನಡೆಸಿದ ಜಾಣಗೆರೆ ವೆಂಕಟರಾಮಯ್ಯ ಅವರಂತಹ ಹೋರಾಟಗಾರನಿಗೆ ಅವಕಾಶ ನೀಡುವುದು ಸೂಕ್ತ. ಅವರ ಪರವಾಗಿ ಚಲಾಯಿಸುವ ಪ್ರತಿಯೊಂದು ಮತವೂ ಕನ್ನಡದ ಸೇವೆಗೆ ನೀಡುವ ಮತವಾಗಲಿದೆ ಎಂದು ಅವರು ಹೇಳಿದ್ದಾರೆ.

“ಕನ್ನಡ ಸಾಹಿತ್ಯ ಪರಿಷತ್ತಿಗೆ ಕೇವಲ ಅಧಿಕಾರ ಅನುಭವಿಸಿದವರು ಮಾತ್ರವಲ್ಲ, ಕನ್ನಡಕ್ಕಾಗಿ ಬದುಕಿದ ನೈಜ ಸೇವಕರು ಬೇಕು. ಈ ಹಿನ್ನೆಲೆಯಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರೇ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ. ಈ ಬಾರಿಯಾದರೂ ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು” ಎಂದು ಹಿರಿಯೂರು ರಾಘವೇಂದ್ರ ಮನವಿ ಮಾಡಿದ್ದಾರೆ.

ಜಾಣಗೆರೆ ವೆಂಕಟರಾಮಯ್ಯ ಅವರ ದೀರ್ಘಕಾಲದ ಕನ್ನಡಪರ ಸೇವೆಯನ್ನು ಗುರುತಿಸಿ, ಗೌರವಿಸಿ, ಅವರನ್ನು ಕಸಾಪ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಅವರ ಗೆಲುವು ಕೇವಲ ವ್ಯಕ್ತಿಯ ಗೆಲುವಾಗದೆ, ಕನ್ನಡಿಗರ ಗೆಲುವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೈ ಭುವನೇಶ್ವರಿ.

– ಹಿರಿಯೂರು ರಾಘವೇಂದ್ರ
ಲೇಖಕ, ಕಿರುತೆರೆ-ಹಿರಿತೆರೆ ನಿರ್ದೇಶಕ ಹಾಗೂ ಕನ್ನಡಪರ ಚಿಂತಕ

 

Janagere Venkataramaiah is suitable for Kasapa presidency

Share

Leave a comment

Leave a Reply

Your email address will not be published. Required fields are marked *

Don't Miss

‘ರಾಷ್ಟ್ರದ ಸುರಕ್ಷತೆಗಾಗಿ ಎಲ್ಲರೂ ಒಂದಾಗಬೇಕು’

ಚಿಕ್ಕಮಗಳೂರು: ರಾಷ್ಟ್ರದ ಸುರಕ್ಷತೆ ಹಾಗೂ ದೇಶದ ಹಿತಾಸಕ್ತಿಗಾಗಿ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು. ನಗರದಲ್ಲಿ ಸೋಮವಾರ ಟಿಪ್ಪು...

ಆರೋಪಿಯಿಂದ ₹11.30 ಲಕ್ಷ ಮೌಲ್ಯದ 71 ಗ್ರಾಂ ಚಿನ್ನಾಭರಣ ವಶ

ಎನ್.ಆ‌ರ್. ಪುರ: ಮನೆಯ ಹಂಚು ತೆಗೆದು ಒಳನುಗ್ಗಿ, ಮಲಗಿದ್ದ ಮಹಿಳೆಯ ಕೊರಳಿನಿಂದ ಮಾಂಗಲ್ಯ ಸರ ಎಗರಿಸಿದ್ದ ಆರೋಪಿಯನ್ನು ಎನ್.ಆ‌ರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹11.30 ಲಕ್ಷ ಮೌಲ್ಯದ 71 ಗ್ರಾಂ...

Related Articles

ಜನರ ಗಮನ ಸೆಳೆದ ಪ್ರಾಜೆಕ್ಟ್ ಪಂಚತಂತ್ರ ನಾಟಕ

ಚಿಕ್ಕಮಗಳೂರು: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಪ್ರಾಜೆಕ್ಟ್ ಪಂಚತಂತ್ರ ನಾಟಕ...

ತುಂಗಾನದಿಯಲ್ಲಿ ಕಾಲು ಜಾರಿ ಬಿದ್ದು ಪ್ರಾಣ ಯವಕನ ಸಾವು

ಶೃಂಗೇರಿ : ನದಿಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರಹಿಡಿಯಲು ಹೋದ ಯುವಕನೊಬ್ಬ ಕಾಲು ಜಾರಿ ನದಿಗೆ ಬಿದ್ದು...

ಪ್ರವಾಸೋದ್ಯಮ ತಾಣಗಳಿಗೆ ಮೂಲಸೌಕರ್ಯಕ್ಕೆ ಆಗ್ರಹಿಸಿ ಕರವೇ ಧರಣಿ

ಚಿಕ್ಕಮಗಳೂರು:  ಮಲೆನಾಡಿನ ಪಶ್ಚಿಮ ಘಟ್ಟ ಪ್ರವಾಸೋದ್ಯಮದ ಹಲವಾರು ಸಮಸ್ಯೆಗಳ ನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ವಿರುದ್ಧ...

ಮಲ್ಲೇಗೌಡ ಆಸ್ಪತ್ರೆ ಆರೋಗ್ಯ ಸೇವೆ ಬಲಪಡಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೋಮವಾರ...