ನರಸಿಂಹರಾಜಪುರ: ಬಿ.ಎಚ್. ಕೈಮರ ಗ್ರಾಮದ ನಾರಾಯಣಗುರು ಸಮುದಾಯ ಭವನದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರಜಾಸೇವೆ ಅಂದೋಲನ ಸಭೆಯಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ತೆರೆದಿಟ್ಟರು.
9 ತಿಂಗಳಿನಿಂದ ಪಿಂಚಣಿ ಬಂದಿಲ್ಲ. ಮಗ, ಸೊಸೆ ನೋಡಿಕೊಳ್ಳುತ್ತಿಲ್ಲ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಗ್ರಾಮಸ್ಥೆ ಲಕ್ಷ್ಮಮ್ಮ ಸಚಿವರ ಮುಂದೆ ಅವಲತ್ತುಕೊಂಡರು. ಇದಕ್ಕೆ ಉತ್ತರಿಸಿದ ಸಚಿವ ಕೆ.ಜೆ. ಜಾರ್ಜ್, ಕೇಂದ್ರ ಸರ್ಕಾರ ₹35 ಸಾವಿರ ಆದಾಯ ಇರುವವರಿಗೆ ಮಾತ್ರ ಪಿಂಚಣಿ ಕೊಡುವ ನಿಯಮ ರೂಪಿಸಿತ್ತು. ಪ್ರಸ್ತುತ ಆದಾಯದ ಮಿತಿಯನ್ನು ರಾಜ್ಯ ಸರ್ಕಾರ ₹1.20 ಲಕ್ಷಕ್ಕೆ ಹೆಚ್ಚಿಸಿ ಆದಾಯ ಮಾಡಿದೆ. ಪಿಂಚಣಿ ಸ್ಥಗಿತಗೊಂಡಿರುವವರಿಗೆಲ್ಲಾ ಒಂದು ವಾರದೊಳಗೆ ಪಿಂಚಣಿ ವಿತರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ಗೆ ಸೂಚಿಸಿದರು.
ಮನೆ ಮೇಲೆ ವಿದ್ಯುತ್ ಮಾರ್ಗ ಹಾದು ಹೋಗಿದೆ. ಇದನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಮೆಸ್ಕಾಂನವರು ಸ್ಪಂದಿಸಿಲ್ಲ. ವಿದ್ಯುತ್ ಮಾರ್ಗ ಬದಲಾವಣೆ ಮಾಡಬೇಕಾದರೆ ಹಣ ಪಾವತಿಸಬೇಕೆಂದು ಹೇಳುತ್ತಿದ್ದಾರೆ ಎಂದರು. ಮೆಸ್ಕಾಂ ಎಂಜಿನಿಯರ್ ಸಿದ್ದೇಶ್ ಮಾತನಾಡಿ, ಹಣಪಾವತಿ ಮಾಡಿಕೊಳ್ಳದೆ ಉಚಿತವಾಗಿ ವಿದ್ಯುತ್ ಮಾರ್ಗ ಬದಲಾವಣೆಗೆ ಇಲಾಖೆಯಲ್ಲಿ ಅವಕಾಶವಿಲ್ಲ ಎಂದರು.
ಇಲಾಖೆಯಲ್ಲಿ ಅವಕಾಶವಿಲ್ಲವೆಂದು ಹೇಗೆ ಹೇಳುತ್ತಿದ್ದೀರಿ, ನಾನು ಯಾವ ಇಲಾಖೆಯ ಸಚಿವ. ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದರೆ ಇಲಾಖೆಯಿಂದ ವಿದ್ಯುತ್ ಮಾರ್ಗ ವರ್ಗಾಯಿಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು.
ನರಸಿಂಹರಾಜಪುರ- ಚಿಕ್ಕಮಗಳೂರು ಹಳೇ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಚಿವರು ₹50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಭದ್ರಾ ಅಭಯಾರಣ್ಯಕ್ಕೆ ಸೇರಿದ ಪ್ರದೇಶವೆಂದು ಡಿಪಿಆರ್ ಮಾಡಲು ಬೀಡುತ್ತಿಲ್ಲ ಎಂದು ಗ್ರಾಮಸ್ಥರಾದ ಎಲಿಯಾಸ್, ದೇವಂತ್ ರಾಜ್ ಸಭೆಯ ಗಮನಕ್ಕೆ ತಂದರು.
ಈ ಬಗ್ಗೆ ಮಾತನಾಡಿದ ಸಚಿವರು, ‘ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗುವುದು’ ಎಂದರು.
ಗ್ರಾಮಸ್ಥ ಕೈಮರದ ಯೋಗೀಶ್ ಮಾತನಾಡಿ, ಹಲವು ವರ್ಷಗಳಿಂದ ಜಮೀನು ಪೋಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಪೋಡಿ ಮಾಡಿಕೊಟ್ಟಿಲ್ಲ ಎಂದರು.
ಕೊಪ್ಪ ಡಿಎಫ್ಒ ಶಿವಶಂಕರ್ ಅವರು, ‘2002ರಲ್ಲಿ ಜಿಲ್ಲಾಧಿಕಾರಿ 50 ಸಾವಿರ ಹೆಕ್ಟೇರ್ ಪ್ರದೇಶವನ್ನು ಡಿ.ಸಿ ಅರಣ್ಯ ಎಂದು ಆದೇಶ ಮಾಡಿದ್ದಾರೆ. ಪ್ರಸ್ತುತ ಜಂಟಿ ಸರ್ವೆ ನಡೆಯುತ್ತಿದ್ದ 185 ಗ್ರಾಮಗಳ ಪೈಕಿ 99 ಗ್ರಾಮಗಳಲ್ಲಿ ಜಂಟಿ ಸರ್ವೆ ಮುಗಿದಿದ್ದು, ಫಾರಂ 50, 53, 94ಸಿ ಅಡಿ ಅರ್ಜಿ ಸಲ್ಲಿಸಿದವರ ಪಕ್ಕಾಪೋಡಿ ಬಾಕಿಯಿದೆ. 86 ಗ್ರಾಮಗಳ 1,527 ಸರ್ವೆ ನಂ.ನಲ್ಲಿ 787 ಸರ್ವೆ ಮುಗಿದಿದೆ. 55 ಸಾವಿರ ಹೆಕ್ಟೇರ್ನಲ್ಲಿ 33,700 ಹೆಕ್ಟೇರ್ ಸರ್ವೆ ಬಾಕಿ ಇದೆ. ಇದು ಮುಗಿದ ಕೂಡಲೇ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಅವರು ಮಾಹಿತಿ ನೀಡಿದರು.
‘ಭದ್ರಾ ಮೇಲ್ದಂಡೆ ಯೋಜನೆಯ ಚಾನಲ್ ನಿರ್ಮಾಣ ಸಂದರ್ಭದಲ್ಲಿ ಬಂಡೆ ಸಿಡಿಸಿದಾಗ ಬಂಡೆ ಮನೆ ಮೇಲೆ ಬಿದ್ದು ಹಾನಿಯಾದರೂ ಇದುವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಮನೆ ನಿರ್ಮಾಣಕ್ಕೆ ₹15 ಲಕ್ಷ ವೆಚ್ಚ ಮಾಡಲಾಗಿದೆ. ನ್ಯಾಯ ಕೊಡಿಸಬೇಕೆಂದು’ ಕೆ. ಕಣಬೂರು ಗ್ರಾಮಸ್ಥ ಕೆ.ಜೋನಿ ಮನವಿ ಮಾಡಿದರು.
ಮನೆಯ ಮೌಲ್ಯ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಎಂಜಿನಿಯರ್ ತಿಳಿಸಿದರು. ಈ ಬಗ್ಗೆ ಎಂಜಿನಿಯರ್ಗೆ ತರಾಟೆ ತೆಗೆದುಕೊಂಡ ಸಚಿವರು, ಆರೇಳು ವರ್ಷವಾದರೂ ಪರಿಹಾರ ಕೊಡದಿದ್ದರೆ ಹೇಗೆ. ಗುತ್ತಿಗೆದಾರರಿಂದ ಪರಿಹಾರ ಕೊಡಿಸಬಹುದಿತ್ತಲ್ಲ. ಶೀಘ್ರ ಪರಿಹಾರ ಕೊಡಿಸಿ ವರದಿ ನೀಡುವಂತೆ ಸೂಚಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ವಿಧಾನಪರಿಷತ್ ಸದಸ್ಯೆ ಅರತಿಕೃಷ್ಣ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಮಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಕೀರ್ತನಾ, ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ, ಅರಣ್ಯ ಇಲಾಖೆಯ ಪುಲ್ಮೀತ್ ಮೀನಾ, ಬೋರಯ್ಯ, ಶಿವಶಂಕರ್, ಡಿವೈಎಸ್ಪಿ ಮೇಘ, ತರೀಕೆರೆ ಉಪವಿಭಾಗಾಧಿಕಾರಿ ನಟೇಶ್, ತಹಶೀಲ್ದಾರ್ ನೂರುಲ್ ಹುದಾ, ನಿಷ್ಮಾ ಜೈನ್ ಇದ್ದರು.
Taluk level public service agitation meeting
Leave a comment