ಚಿಕ್ಕಮಗಳೂರು: ಭಜನೆ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿಯೊಬ್ಬರ ಕುತ್ತಿಗೆಯಿಂದ ಬೈಕ್ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧರಿಸಿದ ವ್ಯಕ್ತಿಗಳು ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಕಲ್ಯಾಣನಗರ 5ನೇ ಕ್ರಾಸ್ನಲ್ಲಿ ಗುರುವಾರ ನಡೆದಿದೆ.
ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಗೃಹಿಣಿಯೊಬ್ಬರು ನರಿಗುಡ್ಡನಹಳ್ಳಿ ಕ್ರಾಸ್ನಲ್ಲಿರುವ ದಾಸ ಸಾಹಿತ್ಯ ಭಜನಾ ಮಂಡಳಿಗೆ ಭಜನೆಗೆ ತೆರಳಿದ್ದರು. ಭಜನೆ ಮುಗಿಸಿಕೊಂಡು ತಮ್ಮ ಭಜನಾ ಮಂಡಳಿಯ ಸ್ನೇಹಿತೆ ಶಾರಾದ ಅವರೊಂದಿಗೆ ಕಲ್ಯಾಣನಗರದಲ್ಲಿರುವ ಮನೆಗೆ ನಡೆದುಕೊಂಡು ಬರುತ್ತಿದ್ದರು.
ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕಲ್ಯಾಣನಗರದ 5ನೇ ಕ್ರಾಸ್ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಾವಿಜನ್ ಸ್ಟೋರ್ ಮುಂಭಾಗ ಇಬ್ಬರೂ ಮಾತನಾಡುತ್ತಾ ನಿಂತಿದ್ದಾಗ, ಹೆಲ್ಮೆಟ್ ಧರಿಸಿದ್ದ ಇಬ್ಬರು ಬೈಕ್ನಲ್ಲಿ ಅಲ್ಲಿಗೆ ಬಂದಿದ್ದಾರೆ. ಬೈಕ್ನ ಹಿಂಬದಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ.
ಮಹಿಳೆ ಸರವನ್ನು ಕೈಯಿಂದ ಹಿಡಿದುಕೊಂಡಿದ್ದರೂ, ಸರದ ಒಂದು ಎಳೆಯನ್ನು ಕಿತ್ತುಕೊಂಡು ಆರೋಪಿಗಳು ಬೈಕ್ನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ. ಮಹಿಳೆ ಜೋರಾಗಿ ಕೂಗಿಕೊಂಡರೂ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ.
ಕಳವಾಗಿರುವ 57 ಗ್ರಾಂ ತೂಕದ ಎರಡು ಎಳೆಯ ಮಾಂಗಲ್ಯ ಸರದಲ್ಲಿ ಸುಮಾರು 19 ಗ್ರಾಂ ತೂಕದ ಒಂದು ಎಳೆ ನಾಪತ್ತೆಯಾಗಿದ್ದು, ಅದರ ಅಂದಾಜು ಮೌಲ್ಯ ₹2.85 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಕುರಿತು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ನಲ್ಲಿ ಬಂದ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Woman’s wedding ring stolen at Kalyananagar 5th Cross
Leave a comment