ಚಿಕ್ಕಮಗಳೂರು: ಮುಸ್ಲಿಂ ಸಮಾಜದ ಬಗ್ಗೆ ನಾನು ಎಂದೂ ಟೀಕಿಸಿ ಮಾತನಾಡಿಲ್ಲ, ದುಷ್ಕೃತ್ಯದಲ್ಲಿ ತೊಡಗುವವರ ವಿರುದ್ಧವಷ್ಟೇ ನಾನು ಮಾತನಾದಿದ್ದೇನೆ ಎಂಬುದನ್ನು ಆ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದೂ ವಿಧಾನ ಪರಿಷತ್ ಶಾಸಕ ಡಾ. ರವಿ ಸಿ. ಟಿ ಸ್ಪಷ್ಟಪಡಿಸಿ ತನ್ನ ವಿರುದ್ಧ ಪೊಲೀಸರು ಎಫ್‌ಐಆರ್ ಹಾಕಿರುವ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇದೇ ಮಾದರಿಯ ಕ್ರಮವನ್ನು ಕರ್ನಾಟಕದಲ್ಲಿ ಕೆಪಿಎಸ್‌ಸಿ ಸೇರಿದಂತೆ ವಿವಿಧ ನೇಮಕಾತಿ ಹಗರಣಗಳಲ್ಲೂ ಕೈಗೊಳ್ಳಬೇಕು ಎಂದು ಅವರು ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗೊಷ್ಟಿಯಲ್ಲಿ ತಿಳಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಸರ್ಕಾರದ ಪಾತ್ರವಿಲ್ಲದಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆ ನಡೆಸಿ 13 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಯಾವುದೇ ವಿವಾದ ಮರುಕಳಿಸದಂತೆ ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ, ಶೇ.99ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಮಾಡಿ ಫಲಿತಾಂಶ ಹಾಗೂ ಶ್ರೇಯಾಂಕ ಪಟ್ಟಿಯನ್ನೂ ಪ್ರಕಟಿಸಲಾಗಿದೆ ಎಂದು ಹೇಳಿದರು.
ಮರುಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳನ್ನು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಸುರಕ್ಷಿತವಾಗಿ ವಿವಿಧ ರಾಜ್ಯಗಳಿಗೆ ರವಾನಿಸಿದ್ದು ಕೇಂದ್ರ ಸರ್ಕಾರ ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿತ್ತು ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ತರಲಾಗುವುದು, 10 ಕೋಟಿವರೆಗೆ ದಂಡ ವಿಧಿಸುವುದು ಹಾಗೂ ತಪ್ಪಿತಸ್ಥರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ತಿದ್ದುಪಡಿಗಳನ್ನು ತರಲಾಗುವುದು ಎಂದು ಘೋಷಿಸಿರುವುದನ್ನೂ ಅವರು ಉಲ್ಲೇಖಿಸಿದರು.
ಕೇಂದ್ರ ಸರ್ಕಾರದ ಕ್ರಮವನ್ನು ಉಲ್ಲೇಖಿಸಿ, ಕರ್ನಾಟಕದಲ್ಲಿ ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಇದೇ ರೀತಿಯ ಗಂಭೀರತೆ ತೋರಿಸಿಲ್ಲ ಎಂದು ಆರೋಪಿಸಿದರು.
ಕೆಪಿಎಸ್‌ಸಿಯಲ್ಲಿ ಇತ್ತೀಚೆಗೆ ಪಶುವೈದ್ಯಕೀಯ ಇನ್‌ಸ್ಪೆಕ್ಟರ್ ಹುದ್ದೆಗೆ 80 ಲಕ್ಷದಿಂದ 1 ಕೋಟಿ ವರೆಗೆ ಹಣದ ಬೇಡಿಕೆ ಇಟ್ಟಿರುವ ಆರೋಪಗಳು ಬಹಿರಂಗವಾಗಿದ್ದರೂ ಯಾವುದೇ ಪ್ರಕರಣ ದಾಖಲಿಸಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಕೆಪಿಎಸ್‌ಸಿ ಮೂಲಕ ಸುಮಾರು 3 ಸಾವಿರಕ್ಕೂ ಹೆಚ್ಚು ನೇಮಕಾತಿಗಳು ನಡೆದಿದ್ದು, ಒಂದು ಹುದ್ದೆಯಲ್ಲೇ ಅಕ್ರಮ ನಡೆದಿದ್ದರೆ ಉಳಿದ ನೇಮಕಾತಿಗಳ ಬಗ್ಗೆಯೂ ಅನುಮಾನ ಮೂಡುತ್ತದೆ ಎಂದು ಹೇಳಿದರು.
ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಸಂಪೂರ್ಣ ಕೆಪಿಎಸ್‌ಸಿ ಹಗರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನೀಟ್ ಪರೀಕ್ಷೆ ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯವ ಕುಟುಂಬದ ಒಡೆತನದ ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ನಡೆದ ಉತ್ತರಪತ್ರಿಕೆ ಅದಲುಬದಲು ಪ್ರಕರಣ ಸೇರಿದಂತೆ ವಿವಿಧ ಶಿಕ್ಷಣ ಸಂಬಂಧಿತ ಆರೋಪಗಳಲ್ಲಿ ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಎಸ್ಎಸ್ಎಲ್ಸಿ, ಸಿಇಟಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿಯೂ ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಂಡಿಲ್ಲ. ಇದರಿಂದ ಭ್ರಷ್ಟಾಚಾರದ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರವೇ ಪೋಷಿಸುತ್ತಿದೆ ಎಂಬ ಅನುಮಾನ ಮೂಡುತ್ತದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಕುರಿತು ಪ್ರತಿಕ್ರಿಯಿಸಿದ ಅವರು, ತಾವು ಯಾವುದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನೀಟ್ ಪ್ರತಿಭಟನೆಯ ಸಂದರ್ಭದಲ್ಲಿ ಜೀಪಿನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದ ಒಬ್ಬ ಮುಲ್ಲಾನ ಉಲ್ಲೇಖಿಸಿ ಮಾತನಾಡಿದ್ದೇನೆ. “ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ” ಎಂದು ಪ್ರಶ್ನಿಸಿದ್ದೇ ಹೊರತು, ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ತಾವು ಜಿಹಾದಿಗಳು, ಭಯೋತ್ಪಾದಕರು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಕ್ರಿಮಿನಲ್‌ಗಳ ವಿರುದ್ಧ ಮಾತನಾಡಿದ್ದೇನೆ. ಮುಸ್ಲಿಂ ಸಮಾಜದ ವಿರುದ್ಧ ಒಂದೇ ಒಂದು ಪದವೂ ಬಳಸಿಲ್ಲ ಎಂದು ಪುನರುಚ್ಚರಿಸಿದರು.
ಕೆಲವು ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿ ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿರುವಂತೆ ಪ್ರಸಾರ ಮಾಡಿವೆ. ಇದರಿಂದ ತಪ್ಪು ಸಂದೇಶ ಹೋಗಿದ್ದು, ಅಂತಹ ಮಾಧ್ಯಮಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಮ್ಮ ವಿರುದ್ಧ ದೂರು ನೀಡಿರುವ ವ್ಯಕ್ತಿ ಮತ್ತು ತಾವು ಉಲ್ಲೇಖಿಸಿದ ಕ್ರಿಮಿನಲ್ ವ್ಯಕ್ತಿಯ ನಡುವೆ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬೆದರಿಸುವ ಪ್ರಯತ್ನ ನಡೆದರೂ ಸತ್ಯವನ್ನು ಹೇಳುವುದನ್ನು ನಿಲ್ಲಿಸುವುದಿಲ್ಲ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ಭಯೋತ್ಪಾದನೆ, ಜಿಹಾದಿ ಚಟುವಟಿಕೆಗಳು ಹಾಗೂ ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಮುಂದೆಯೂ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.
ಬಂಧನಕ್ಕೆ ತಾವು ಹೆದರುವುದಿಲ್ಲ. ಅಗತ್ಯವಿದ್ದರೆ ನ್ಯಾಯಾಲಯದಲ್ಲೂ ಮತ್ತು ಜನತಾ ನ್ಯಾಯಾಲಯದಲ್ಲೂ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದರು.
ವಾಲ್ಮೀಕಿ ನಿಗಮ ಹಗರಣ, ಅರ್ಕಾವತಿ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆ ಏನು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರ ಸರ್ಕಾರ ನೀಟ್ ಪ್ರಕರಣದಲ್ಲಿ ತೋರಿಸಿದ ತ್ವರಿತ ಸ್ಪಂದನೆ ಮತ್ತು ಉತ್ತರದಾಯಿತ್ವವನ್ನು ರಾಜ್ಯ ಸರ್ಕಾರವೂ ಅನುಸರಿಸಬೇಕು ಎಂದು ಹೇಳಿದರು.
ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ ರವಿ, ತಾವು ಕಾಫಿ ಅಥವಾ ಚಹಾವನ್ನೇ ಸೇವಿಸದ ವ್ಯಕ್ತಿಯಾಗಿದ್ದರೂ ತಮ್ಮನ್ನು ಮದ್ಯಪಾನಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಯುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಪುಟದಲ್ಲಿ ತಮ್ಮ ಬಗ್ಗೆ ಇಂತಹ ಪೋಸ್ಟ್‌ಗಳನ್ನು ಹಾಕಲಾಗಿದೆ. ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದ ಕಾರಣ ವ್ಯಕ್ತಿತ್ವ ಹರಣ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಇನ್ನೊಂದು ನ್ಯಾಯ ಇರಬಾರದು. ತಮ್ಮ ಬಗ್ಗೆ ಅವಹೇಳನಕಾರಿ ಹಾಗೂ ಸುಳ್ಳು ಪ್ರಚಾರ ನಡೆಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರವಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಎಚ್. ಎಸ್ ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರ ಪ್ರಮುಖರು ಉಪಸ್ಥಿತರಿದ್ದರು.
I have never spoken critically about the Muslim community.
Leave a comment