ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Intensive Revision – SIR) ಕಾರ್ಯವು ಚಿಕ್ಕಮಗಳೂರು ಜಿಲ್ಲೆಯಲ್ಲಿ ವೇಗವಾಗಿ ಸಾಗುತ್ತಿದೆ. ಜಿಲ್ಲೆಯ ಒಟ್ಟು 9,60,231 ಮತದಾರರಿಗೆ ಗಣತಿ ನಮೂನೆಗಳನ್ನು (Enumeration Forms – EFs) ವಿತರಿಸುವ ಕಾರ್ಯದಲ್ಲಿ ಇದುವರೆಗೆ 9,20,566 ನಮೂನೆಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ 3,81,871 ನಮೂನೆಗಳನ್ನು ಡಿಜಿಟೈಸೇಶನ್ ಮಾಡಲಾಗಿದೆ.
ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ, ಮನೆ-ಮನೆ ಭೇಟಿ ಮತ್ತು ಗಣತಿ ಕಾರ್ಯವು ಜೂನ್ 30ರಿಂದ ಜುಲೈ 29, 2026ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಚುನಾವಣಾ ಸಿಬ್ಬಂದಿ ಮತದಾರರನ್ನು ನೇರವಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು 2,26,934 ಮತದಾರರಿದ್ದು, ಅದರಲ್ಲಿ 2,05,653 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ನಂತರ ಕಡೂರು ಕ್ಷೇತ್ರದಲ್ಲಿ 2,02,494, ತರೀಕೆರೆಯಲ್ಲಿ 1,89,220, ಮೂಡಿಗೆರೆಯಲ್ಲಿ 1,62,756 ಹಾಗೂ ಶೃಂಗೇರಿಯಲ್ಲಿ 1,60,443 ಗಣತಿ ನಮೂನೆಗಳನ್ನು ವಿತರಿಸಲಾಗಿದೆ.
ಡಿಜಿಟೈಸೇಶನ್ ಪ್ರಗತಿಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರ ಮುಂಚೂಣಿಯಲ್ಲಿದ್ದು 89,689 ನಮೂನೆಗಳನ್ನು ಡಿಜಿಟಲ್ ದಾಖಲಿಸಲಾಗಿದೆ. ನಂತರ ಕಡೂರು ಕ್ಷೇತ್ರದಲ್ಲಿ 86,018, ಚಿಕ್ಕಮಗಳೂರಿನಲ್ಲಿ 80,853, ಶೃಂಗೇರಿಯಲ್ಲಿ 67,404 ಮತ್ತು ಮೂಡಿಗೆರೆಯಲ್ಲಿ 57,907 ನಮೂನೆಗಳು ಡಿಜಿಟೈಸೇಶನ್ ಆಗಿವೆ.
ಇದೇ ವೇಳೆ ಜಿಲ್ಲೆಯಲ್ಲಿ ಒಟ್ಟು 4,380 ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಈ ಪೈಕಿ ತರೀಕೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು 1,740, ಚಿಕ್ಕಮಗಳೂರು ಕ್ಷೇತ್ರದಲ್ಲಿ 1,441, ಕಡೂರು ಕ್ಷೇತ್ರದಲ್ಲಿ 591, ಮೂಡಿಗೆರೆ ಕ್ಷೇತ್ರದಲ್ಲಿ 443 ಹಾಗೂ ಶೃಂಗೇರಿ ಕ್ಷೇತ್ರದಲ್ಲಿ 165 ನಮೂನೆಗಳು ಸಂಗ್ರಹವಾಗಿಲ್ಲ.
ಚುನಾವಣಾ ಅಧಿಕಾರಿಗಳು ಉಳಿದಿರುವ ಮನೆಗಳಿಗೆ ಮತ್ತೆ ಭೇಟಿ ನೀಡಿ ಗಣತಿ ನಮೂನೆಗಳನ್ನು ಸಂಗ್ರಹಿಸುವ ಕಾರ್ಯವನ್ನು ತ್ವರಿತಗೊಳಿಸಿದ್ದು, ಎಲ್ಲ ಅರ್ಹ ಮತದಾರರ ಮಾಹಿತಿಯನ್ನು ನವೀಕರಿಸುವ ಉದ್ದೇಶದಿಂದ ಅಭಿಯಾನ ಮುಂದುವರಿದಿದೆ. ಮತದಾರರು ಚುನಾವಣಾ ಸಿಬ್ಬಂದಿಗೆ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ
Special Voters List Revision Progress
Leave a comment