ಚಿಕ್ಕಮಗಳೂರು: ಪರಿಸರದ ಮೇಲೆ ಹಾನಿ, ಒತ್ತಡ ತಡೆಯುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೈಗಾರಿಕೆ ಅಥವಾ ಕಟ್ಟಡ ಮತ್ತಿತರೆ ನಿರ್ಮಾಣಗಳಿಗೆ ಕಾಯಿದೆ ಉಲ್ಲಂಘನೆ ಮಾಡಿ ಅನುಮತಿ ನೀಡಿಲ್ಲ, ನೀಡುವುದೂ ಇಲ್ಲ ಎಂದು ರಾಜ್ಯ ಪರಿಸರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ೨೦೦೬ ರಲ್ಲಿ ಕೇಂದ್ರ ಪರಿಸರ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಪರಿಸರದ ಮೇಲಿನ ಒತ್ತಡ, ಹಾನಿ ಅಂದಾಜು ಮಾಡುವ ಉದ್ದೇಶದಿಂದ ಎಸ್‌ಇಎಸಿ ಸಮಿತಿ ರಚನೆ ಮಾಡಲಾಗಿದೆ ಎಂದರು.
ಪರಿಸರದ ಮೇಲೆ ದುಷ್ಪರಿಣಾಮ ಉಂಟುಮಾಡುವಂತಹ ಯಾವುದೇ ಗಣಿಗಾರಿಕೆ ಅಥವಾ ಕಟ್ಟಡ ಮತ್ತಿತರೆ ನಿರ್ಮಾಣ ಕುರಿತ ಎನ್‌ಒಸಿ ಅರ್ಜಿಗಳನ್ನು ವಜಾ ಮಾಡುತ್ತೇವೆ. ಇದನ್ನೆಲ್ಲಾ ಕೇಂದ್ರ ಸರಕಾರವೇ ಮಾನಿಟರ್ ಮಾಡುತ್ತದೆ. ಪೂರ್ವಪರಿಶೀಲನೆ ನಮ್ಮ ಕಚೇರಿಯಲ್ಲಿ ನಡೆಯುತ್ತದೆ. ನ್ಯೂನತೆ ಕಂಡುಬಂದಲ್ಲಿಆನ್ ಲೈನಿನಲ್ಲೇ ಪರಿಶೀಲನೆ, ವಿಚಾರಣೆ ಮಾಡಲಾಗುವುದು. ಈ ವಿಚಾರಕ್ಕೆ ಸಂಬಂಸಿದಂತೆ ನಮ್ಮಲ್ಲಿ ತಜ್ಞರ ತಂಡವೇ ಇದೆ ಎಂದು ಹೇಳಿದರು.
ನಾನು ಅಧ್ಯಕ್ಷನಾಗಿ ನೇಮಕವಾದ ಮೇಲೆ ೨೦ ಸಾವಿರ ಚದರ ಅಡಿಗೂ ಹೆಚ್ಚಿರುವ ಕಟ್ಟಡದ ಛಾವಣೆಯಲ್ಲಿ ಕಡ್ಡಾಯವಾಗಿ ಸೋಲಾರ್ ಪ್ಯಾನಲ್ ಅಳವಡಿಸಿರಬೇಕು, ಗಣಿಗಾರಿಕೆ ಆದಲ್ಲಿ ಶೇ.೩೩ ರಷ್ಟು ಹಸಿರು ಗಿಡಮರ ಬೆಳೆಸಿರಬೇಕು, ಪ್ರತಿ ಅಪಾರ್ಟ್ ಮೆಂಟ್ ನಲ್ಲೂ ಇವಿ ಚಾರ್ಜರ್ ಹೊಂದಿರಬೇಕು. ಅವರ ಆದಾಯದಲ್ಲಿ ಶೇ.೧ ರಷ್ಟು ಸಿಇಆರ್ ನಿ ಮೀಸಲಿಡಬೇಕು. ಸರಕಾರಿ ಶಾಲೆ, ಅಂಗನವಾಡಿ, ಸರಕಾರಿ ಆಸ್ಪತ್ರೆಗಳಿಗೆ ಸೋಲಾರ್, ಕುಡಿವ ನೀರಿಗಾಗಿ, ಮಳೆ ನೀರು ಕೊಯ್ಲು ಸಿಇಆರ್ ನಲ್ಲಿ ಆದ್ಯತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯು ದೇಶದಲ್ಲೇ ನಂ.೧ನೇ ಸ್ಥಾನದಲ್ಲಿದೆ. ತಿಂಗಳಿಗೆ ಸಮಿತಿ ಮುಂದೆ ೨೫-೧೦೦ ಅರ್ಜಿಗಳು ಬರುತ್ತವೆ. ತಿಂಗಳಲ್ಲಿ ೨ ಸಭೆ ಮಾಡುತ್ತೇವೆ. ಕಾಯಿದೆ ಉಲ್ಲಂಘನೆಯ ೮೦ ಅರ್ಜಿಗಳಿದ್ದು ಈಗಾಗಲೇ ೩೦ ಅರ್ಜಿ ತಿರಸ್ಕರಿಸಿದ್ದೇವೆ. ಹೀಗಾಗಿ ನಮ್ಮ ಮೇಲೆಯೇ ೪ ಕೇಸುಗಳು ಎನ್‌ಜಿಟಿ ಯಲ್ಲಿ ದಾಖಲಾಗಿವೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ೫೦ ಅರ್ಜಿಗಳು ಬಂದಿದ್ದು ಒಂದಕ್ಕೂ ನಾವು ಅನುಮತಿ ನೀಡಿಲ್ಲ ಎಂದರು.
ಜಿಲ್ಲೆಯ ಕೈಗಾರಿಕೆ ಅಭಿವೃದ್ಧಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೆಐಎಡಿಬಿ ಗೆ ಕಡೂರಿನ ನಗದಿಯತ್ ಕಾವಲಿನಲ್ಲಿ ೪೦೦ ಎಕರೆ ಮಂಜೂರಾಗಿದ್ದು ಅಲ್ಲಿಂದ ನಮಗೆ ಪ್ರಸ್ತಾವನೆ ಬಂದಿದೆ. ತಾಲೂಕಿನ ಮಾಗಡಿ ಹತ್ತಿರ ಕೈಗಾರಿಕೆ ಸ್ಥಾಪನೆ ಬಗ್ಗೆ ಒಂದು ಪ್ರಸ್ತಾವನೆ ಸರಕಾರದ ಮುಮದೆ ಇದೆ ಎಂದು ಮಾಹಿತಿ ನೀಡಿದರು.
ಚಿಕ್ಕಂದಿನಿಂದಲೂ ಪರಿಸರ ಸಂರಕ್ಷಣೆ ಬಗ್ಗೆ ಒಲವು ಹೊಂದಿದ್ದ ತಾವು ಪರಿಸರ ಸಂರಕ್ಷಣಾ ಬಳಗ ಕಟ್ಟಿಕೊಂಡಿದ್ದೆವು. ೨೦೦೩ ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ, ೧೯೯೯ ರಲ್ಲಿ ವಿಜ್ಞಾನ ಕೇಂದ್ರದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇನೆ. ೨೦೧೬ರಲ್ಲಿ ರಾಜ್ಯ ಅರಣ್ಯ ವಸತಿ ವಿಹಾರಧಾಮ ನಿಗಮದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದು ತಮ್ಮ ಪರಿಚಯ ಮಾಡಿಕೊಂಡರು. ಪ್ರೆಸ್ ಕ್ಲಬ್ ಅಧ್ಯಕ್ಷ ಸಿ.ಡಿ.ಚಂದ್ರೇಗೌಡ, ಕಾರ್ಯದರ್ಶಿ ಗೋಪಿ , ಖಜಾಂಚಿ ಪುನೀತ್ ಉಪಸ್ಥಿತರಿದ್ದರು.
The State Environmental Assessment Committee is ranked No. 1 in the country.
Leave a comment