ಕನಸು ಕಾಣಲು ಬಡತನ ಅಡ್ಡಿಯಾಗಬಾರದು, ಗುರಿ ತಲುಪಲು ಅಡೆತಡೆಗಳು ಎದುರಾದಾಗ ಎದೆಗುಂದಬಾರದು ಎನ್ನುವುದಕ್ಕೆ ಚಿಕ್ಕಮಗಳೂರಿನ ಈ ಯುವಕನೇ ಸಾಕ್ಷಿ. ಹಳ್ಳಿಯೊಂದರಲ್ಲಿ ಇಂಟರ್ನೆಟ್ ಸೌಲಭ್ಯವೂ ಇಲ್ಲದ ವಾತಾವರಣದಲ್ಲಿ ಬೆಳೆದ ಯುವಕ ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರೇ ಅವೈಸ್ ಅಹ್ಮದ್. ಅವರ ನೇತೃತ್ವದ ‘Pixxel’ ಸಂಸ್ಥೆ ಈಗ ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ ‘NASA’ ಜೊತೆ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಎಂಬ ಪುಟ್ಟ ಗ್ರಾಮದವರಾದ ಅವೈಸ್ ಅಹ್ಮದ್ ಪಯಣ ಸುಲಭದ್ದಾಗಿರಲಿಲ್ಲ. ಬಾಲ್ಯದಲ್ಲಿ ಇಂಟರ್ನೆಟ್ ಸಂಪರ್ಕವೂ ಸರಿಯಾಗಿಲ್ಲದ ಹಳ್ಳಿಯಲ್ಲಿ ಬೆಳೆದ ಈ ಹುಡುಗನಿಗೆ ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಅಪಾರ ಆಸಕ್ತಿ. ಮಗನ ದೊಡ್ಡ ಕನಸಿಗೆ ಪೋಷಕರು ಬೆನ್ನೆಲುಬಾಗಿ ನಿಂತರು. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮಗನ ಶಿಕ್ಷಣಕ್ಕಾಗಿ ಸಾಲ ಮಾಡಿದರು, ಮನೆಯಲ್ಲಿದ್ದ ಚಿನ್ನವನ್ನು ಅಡವಿಟ್ಟರು. ಪೋಷಕರ ಈ ತ್ಯಾಗ ಇಂದು ವಿಶ್ವಮಟ್ಟದಲ್ಲಿ ಪ್ರತಿಫಲ ನೀಡಿದೆ.
ಅವೈಸ್ ಅಹ್ಮದ್ ಬಿಟ್ಸ್ ಪಿಲಾನಿ (BITS Pilani) ಸಂಸ್ಥೆಯಲ್ಲಿ ಓದುತ್ತಿದ್ದಾಗಲೇ ಏನಾದರೂ ಹೊಸತು ಮಾಡಬೇಕೆಂಬ ಹಂಬಲ ಹೊಂದಿದ್ದರು. ಈ ಆಲೋಚನೆಯ ಫಲವೇ ‘Pixxel’. ವಿದ್ಯಾರ್ಥಿಯಾಗಿದ್ದಾಗಲೇ ಈ ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲು ಮುಂದಾದರು. ಇಸ್ರೋ (ISRO) ಸಹಯೋಗದೊಂದಿಗೆ ಬೆಳೆದ ಈ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಅವೈಸ್ ಅಹ್ಮದ್ ಅವರ ಸಾಧನೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಖಾಸಗಿ ಸ್ಪೇಸ್ ಸ್ಟಾರ್ಟ್‌ಅಪ್ ಎಂಬ ಹೆಗ್ಗಳಿಕೆಗೆ Pixxel ಪಾತ್ರವಾಗಿದೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯ.
- ಇದುವರೆಗೆ 9 ಅತ್ಯಾಧುನಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
- ಜಾಗತಿಕ ಹೂಡಿಕೆದಾರರಿಂದ ಸುಮಾರು 960 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಈ ಸಂಸ್ಥೆ ಪಡೆದಿದೆ.
- ಇಂದು ಈ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ 275ಕ್ಕೂ ಹೆಚ್ಚು ಪರಿಣಿತ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಯುವಜನತೆಗೆ ಸ್ಫೂರ್ತಿ
ಗ್ರಾಮೀಣ ಭಾಗದ ಪ್ರತಿಭೆಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವೈಸ್ ಅಹ್ಮದ್ ಅವರ ಈ ಪಯಣವೇ ಸಾಕ್ಷಿ. ಇಂಟರ್ನೆಟ್ ಇಲ್ಲದ ಬಾಲ್ಯದಿಂದ ಬಾಹ್ಯಾಕಾಶದ ಯಶಸ್ವಿ ಉದ್ಯಮಿಯವರೆಗೆ ಅವರ ಈ ಜರ್ನಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.
ತಮ್ಮ ಪೋಷಕರ ತ್ಯಾಗಕ್ಕೆ ವಿಶ್ವಮಟ್ಟದ ಸಾಧನೆಯ ಮೂಲಕ ಗೌರವ ತಂದಿರುವ ಅವೈಸ್ ಅಹ್ಮದ್, ಇಂದು ಕಾಫಿನಾಡು ಚಿಕ್ಕಮಗಳೂರಿನ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿದ್ದಾರೆ. ಅವರ ಈ ಪಯಣ ಇನ್ನೂ ಎತ್ತರಕ್ಕೆ ಬೆಳೆಯಲಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿ ಎಂಬುದು ನಮ್ಮ ಆಶಯ.
Achievement of a young man from Aldur in the field of space
Leave a comment