ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಆರೋಪ ಶೃಂಗೇರಿ ತಾಲೂಕಿನ ಗುಬ್ಬಗೋಡಿನಲ್ಲಿ ನಡೆದಿದೆ.
ಗ್ರಾಮದ ಅಂಗನವಾಡಿಯಲ್ಲಿ ಸಂಘದ ಸಭೆ ನಡೆಯುತ್ತಿದ್ದಾಗ ಈ ಗಲಾಟೆ ಆರಂಭವಾಗಿದೆ ಎನ್ನಲಾಗಿದೆ. ಸಂಘದ ಸದಸ್ಯರಾದ ದೂರುದಾರೆ ಮಹಿಳೆ, ನಿಯಮದ ಪ್ರಕಾರ ಸಂಘದಲ್ಲಿ ಸಕ್ರಿಯರಾಗಿರುವ ಸದಸ್ಯರಿಗೆ ಮಾತ್ರ ಸಾಲ ನೀಡುವುದಾಗಿ ತಿಳಿಸಿದಾಗ. ಈ ಮಾತಿನಿಂದ ಆಕ್ರೋಶಗೊಂಡ ಅದೇ ಗ್ರಾಮದ ಶಾಂತಿ ಎಂಬುವವರು ಸಭೆಯಲ್ಲೇ ಜಗಳ ತೆಗೆದಿದ್ದಾರೆಂದು ದೂರಲಾಗಿದೆ.
ಇಷ್ಟಕ್ಕೇ ನಿಲ್ಲದ ಜಗಳದ ಕಿಡಿ ಮಹಿಳೆ ಸಭೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ದಾರಿಯಲ್ಲಿ ಶಾಂತಿ ಮತ್ತು ಆಕೆಯ ಮಗ ದೊಣ್ಣೆಗಳೊಂದಿಗೆ ಅಡ್ಡಗಟ್ಟಿ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಪತ್ನಿಯನ್ನು ರಕ್ಷಿಸಲು ಧಾವಿಸಿದ ಪತಿ ವಿಜೇಂದ್ರ ಅವರ ಮೇಲೂ ಇಬ್ಬರು ಮನಬಂದಂತೆ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಜೀವರಕ್ಷಕ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದ್ದು . ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ದಂಪತಿಗಳನ್ನು ಚಿಕಿತ್ಸೆಗಾಗಿ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೂ ಶಾಂತಿಯ ಪತಿ ಸುಧೀರ್ ದಾರಿಯಲ್ಲಿ ಕಾರನ್ನು ಅಡ್ಡಗಟ್ಟಿ ಮತ್ತೆ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ
ಈ ಭೀತಿಯಿಂದಾಗಿ ದಂಪತಿಗಳು ಮೊದಲು ಚಿಕಿತ್ಸೆ ಪಡೆಯಲಾಗದೆ ಹಿಂತಿರುಗಿ, ಮರುದಿನ ತಡವಾಗಿ ಅಭಿನವ ವಿದ್ಯಾತೀರ್ಥ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗಾಯಾಳುಗಳು ನೀಡಿದ ದೂರಿನ ಮೇರೆಗೆ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Couple attacked with sticks over Dharmasthala Sangha loan dispute
Leave a comment