ಚಿಕ್ಕಮಗಳೂರು: ಕಾಫಿನಾಡಿನ ಹೃದಯ ಭಾಗದಲ್ಲಿರುವ ಎಸ್ಪಿ ಮತ್ತು ಡಿಸಿ ಕಚೇರಿ ಪಕ್ಕದಲ್ಲೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕಡೂರು ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ಚಿಕ್ಕಮಗಳೂರಿನ ಹಾಸ್ಟೆಲ್ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು.
ಆದರೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ರೋಹಿತ್ ಎಂಬ ಹುಚ್ಚು ಪ್ರೇಮಿ ಈಕೆಯ ಹಿಂದೆ ಬಿದ್ದಿದ್ದನು. ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಯುವಕ, ಜಿಲ್ಲಾ ಕ್ರೀಡಾಂಗಣದಲ್ಲಿ ಆಕೆಯನ್ನು ನೆಲಕ್ಕೆ ಹಾಕಿ ಮನಬಂದಂತೆ ತುಳಿದು ಹಲ್ಲೆ ನಡೆಸಿದ್ದಾನೆ.
ಈ ಕ್ರೂರ ಕೃತ್ಯ ಕ್ರೀಡಾಂಗಣದಲ್ಲಿದ್ದ ಸಾರ್ವಜನಿಕರ ಕಣ್ಣಿಗೆ ಬೀಳುತ್ತಿದ್ದಂತೆ, ಅವರು ತಕ್ಷಣವೇ ಬಾಲಕಿಯ ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರು ಓಡಿ ಬರುವುದನ್ನು ಕಂಡ ಪಾಗಲ್ ಪ್ರೇಮಿ ರೋಹಿತ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದರೂ ಬಿಡದ ಸಾರ್ವಜನಿಕರು ಆತನನ್ನು ಬೆನ್ನಟ್ಟಿ ಹೋಗಿ, ಎಸ್ಪಿ ನಿವಾಸದ ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಹುಚ್ಚು ಪ್ರೇಮಿಯನ್ನು ತಕ್ಷಣವೇ ಅಕ್ಕ ಪಡೆ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಯುವಕನ ಕಾಟ ಇದೇ ಮೊದಲಲ್ಲ ಎಂಬುದು ಈಗ ಬಯಲಾಗಿದೆ. ಈ ಹಿಂದೆ ಬಾಲಕಿಯ ಮನೆ ಬಳಿಗೂ ಹೋಗಿ ಪ್ರೀತಿಸುವಂತೆ ಬೆದರಿಕೆ ಹಾಕಿದ್ದ ಈತ, ಬಾಲಕಿಯ ಪೋಷಕರಿಗೂ ಫೋನ್ ಮಾಡಿ ಧಮ್ಮಿ ಹಾಕಿದ್ದನು.
ಅಷ್ಟೇ ಅಲ್ಲದೇ, ಬಾಲಕಿ ಉಳಿದುಕೊಂಡಿದ್ದ ಹಾಸ್ಟೆಲ್ ಬಳಿಗೂ ಬಂದು ರಂಪಾಟ ಮಾಡಿದ್ದರಿಂದ ಹಾಸ್ಟೆಲ್ ವಾರ್ಡನ್ ಕೂಡ ಈ ಬಗ್ಗೆ ಬಾಲಕಿಗೆ ಎಚ್ಚರಿಕೆ ನೀಡಿದ್ದರು. ಸದ್ಯ ಈ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
Love rejection: Attack on girl
Leave a comment