ಚಿಕ್ಕಮಗಳೂರು: ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಆಗ್ರಹಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಎರಡು ತಿಂಗಳ ಮಗುವಿನ ಸಾವಿನ ಘಟನೆ ಸೇರಿದಂತೆ ಸರಣಿ ಪ್ರಕರಣಗಳು ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವುದು ಕಳವಳಕಾರಿ. ಸಣ್ಣದೊಂದು ಗಂಭೀರ ಪ್ರಕರಣ ಬಂದರೂ ಇಲ್ಲಿಂದ ಶಿವಮೊಗ್ಗ, ಹಾಸನ, ಮಂಡ್ಯ ಅಥವಾ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಜನರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವೇನು ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜು ಸ್ಥಾಪನೆಯ ಹಿಂದೆ ಎರಡು ಪ್ರಮುಖ ಉದ್ದೇಶಗಳಿದ್ದವು. ಜಿಲ್ಲೆಯ ಮಕ್ಕಳಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಬೇಕು ಹಾಗೂ ಜಿಲ್ಲೆಯ ಬಡ ರೋಗಿಗಳಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬ ಆಶಯದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಲಾಗಿತ್ತು ಎಂದು ತಿಳಿಸಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಕಾಮಗಾರಿಗಳನ್ನು ಪ್ರತಿನಿತ್ಯ ಮೇಲ್ವಿಚಾರಣೆ ಮಾಡುತ್ತಿದ್ದೆ. ನಂತರ ವಿಧಾನ ಪರಿಷತ್ ಸದಸ್ಯನಾದ ಬಳಿಕ ವಿದ್ಯಾರ್ಥಿನಿಲಯದ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜಕೀಯ ಕಾರಣಗಳಿಂದ ಅಧಿಕಾರಿಗಳನ್ನು ತಡೆಯುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇನ್ನೂ ಬಾಕಿ ಇರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ ಬಡವರ ಸೇವೆಗೆ ಸಮರ್ಪಿಸಬೇಕು. ಅಗತ್ಯ ಸಂಖ್ಯೆಯ ತಜ್ಞ ವೈದ್ಯರು ಹಾಗೂ ಅಧಿಕಾರಿಗಳನ್ನು ನೇಮಕ ಮಾಡಬೇಕು. ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ಅಥವಾ ಲಂಚಕ್ಕೆ ಅವಕಾಶ ನೀಡಬಾರದು. ಸೇವಾ ಮನೋಭಾವ ಹೊಂದಿರುವ ಉತ್ತಮ ವೈದ್ಯರು ಮತ್ತು ಅಧಿಕಾರಿಗಳನ್ನು ನೇಮಿಸಿದರೆ ಆಸ್ಪತ್ರೆ ಅತ್ಯುತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಆದರೆ ನೇಮಕಾತಿ ಅಥವಾ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದರೆ ಅದರ ಪರಿಣಾಮ ಜನಸೇವೆಯ ಮೇಲೆಯೇ ಬೀಳುತ್ತದೆ ಎಂದು ಹೇಳಿದರು.
ಯಾವುದೇ ಮಗುವಿನ ಸಾವು ಕುಟುಂಬಕ್ಕೆ ಭರಿಸಲಾಗದ ನೋವು. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದರೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಾಗಲೇ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಬಡ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ವಾತಾವರಣ ನಿರ್ಮಿಸಬೇಕು ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ದೇಶವೇ ಎಂಆರ್‌ಐ ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವುದು. ಸಾಮಾನ್ಯ ಸಂದರ್ಭಗಳಲ್ಲಿ ರೋಗಿಗಳನ್ನು ಹೊರ ಜಿಲ್ಲೆಗಳಿಗೆ ಕಳುಹಿಸಬಾರದು. ಯಂತ್ರೋಪಕರಣಗಳಲ್ಲಿ ತಾತ್ಕಾಲಿಕ ತಾಂತ್ರಿಕ ಸಮಸ್ಯೆ ಎದುರಾದರೆ ಬಳಕೆದಾರರ ನಿಧಿ (ಯೂಸರ್ಸ್ ಫಂಡ್) ಬಳಸಿ ತಕ್ಷಣ ಸೇವೆ ಪುನರಾರಂಭಿಸಬೇಕು. ಸ್ವಲ್ಪ ಗಂಭೀರ ಪ್ರಕರಣಗಳಿಗೂ ಹಾಸನ ಅಥವಾ ಶಿವಮೊಗ್ಗಕ್ಕೆ ಕಳುಹಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಆಡಳಿತ ಪಕ್ಷದವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಜಿಲ್ಲೆಯ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಆಂಬ್ಯುಲೆನ್ಸ್, ವೆಂಟಿಲೇಟರ್ ಸೇರಿದಂತೆ ಹಲವು ಅಗತ್ಯ ಸೌಲಭ್ಯಗಳು ಕಾರ್ಯನಿರ್ವಹಿಸದೆ ನಿಂತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವುದನ್ನು ಗಮನಿಸಿದ್ದೇನೆ. ಮಾಧ್ಯಮಗಳ ಈ ಮಾನವೀಯ ಕಾಳಜಿಯ ಪ್ರಯತ್ನ ಅರಣ್ಯರೋದನವಾಗಬಾರದು. ಸರ್ಕಾರ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಜನರು ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗದಂತೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಅಗತ್ಯ ವೈದ್ಯಕೀಯ ಸೇವೆಗಳು ಶೀಘ್ರ ಲಭ್ಯವಾಗುವಂತೆ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಹೋರಾಟದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ ಎಂದು ರವಿ ಎಚ್ಚರಿಕೆ ನೀಡಿದರು.
Medical College Hospital should be fully functional
Leave a comment