ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಚಾರಣ ತಾಣವಾದ ನೇತ್ರಾವತಿ ಪೀಕ್ನ ಆನ್ಲೈನ್ ಟಿಕೆಟ್ ಬುಕ್ಕಿಂಗ್ನಲ್ಲಿ ಭಾರೀ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಾಡಿಚ್ಚಿನ ಮುಂಜಾಗ್ರತಾ ಕ್ರಮವಾಗಿ ಕಳೆದ ಮೂರು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಈ ತಾಣ ಜೂನ್ ಒಂದರಿಂದ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಪ್ರವಾಸಿಗರು ಚಾರಣಕ್ಕೆ ಸಜ್ಜಾಗುತ್ತಿದ್ದಾರೆ.
ಆದರೆ ಇದರ ಬೆನ್ನಲ್ಲೇ ಆನ್ಲೈನ್ ಬುಕ್ಕಿಂಗ್ ಆರಂಭವಾದ ಕೇವಲ 47 ಸೆಕೆಂಡ್ಗಳಲ್ಲೇ ಲಭ್ಯವಿದ್ದ ಎಲ್ಲಾ 300 ಟಿಕೆಟ್ಗಳು ಖಾಲಿಯಾಗುವ ಮೂಲಕ ಟ್ರೆಕ್ಕಿಂಗ್ ಮಾಫಿಯಾದ ದಂಧೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನೇತ್ರಾವತಿ ಪೀಕ್ ಚಾರಣಕ್ಕೆ ದಿನಕ್ಕೆ ಗರಿಷ್ಠ 300 ಜನರಿಗೆ ಮಾತ್ರ ಅವಕಾಶವಿದ್ದು, ಒಬ್ಬ ವ್ಯಕ್ತಿ ಗರಿಷ್ಠ 3 ಜನರಿಗೆ ಮಾತ್ರ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ. ವಾರಾಂತ್ಯದಲ್ಲಿ 200 ಟಿಕೆಟ್ ಬುಕ್ ಮಾಡಲು ಅವಕಾಶವಿದ್ದು ಉಳಿದ 50 ಟಿಕೆಟ್ ಸ್ಥಳೀಯರಿಗೆ ಹಾಗೂ 50 ತತ್ಕಾಲ್ ಕೋಟಾದಡಿ ಮೀಸಲಿಡಲಾಗುತ್ತದೆ.
ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳ ಅವಧಿಗೆ ಬುಕ್ಕಿಂಗ್ ವ್ಯವಸ್ಥೆ ಮುಕ್ತವಾಗಲಿದ್ದು, ಬೆಳಿಗ್ಗೆ 11 ಗಂಟೆಗೆ ಲಾಗಿನ್ ಆಗುವಷ್ಟರಲ್ಲೇ ಕೇವಲ 47 ಸೆಕೆಂಡ್ಗಳಲ್ಲಿ ಹೌಸ್ಫುಲ್ ಬೋರ್ಡ್ ಬೀಳುತ್ತಿರುವುದು ಸಾಮಾನ್ಯ ಚಾರಣಿಗರು ಹಾಗೂ ಪ್ರವಾಸಿಗರಿಗೆ ನಿರಾಶೆ ಮೂಡಿಸಿದೆ.
ಈ ವ್ಯವಸ್ಥಿತ ಮಾಫಿಯಾದ ಹಿಂದೆ ಬೆಂಗಳೂರಿನ ಕೆಲವು ಪ್ರಮುಖ ಖಾಸಗಿ ಟ್ರೆಕ್ಕಿಂಗ್ ಮತ್ತು ಟ್ರಾವೆಲ್ ಏಜೆಂಟ್ ಗಳು ಸಕ್ರಿಯರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏಜೆನ್ಸಿಗಳು ತಮ್ಮ ಕಚೇರಿಗಳಲ್ಲಿ 20 ರಿಂದ 25 ನೌಕರರನ್ನು ಏಕಕಾಲಕ್ಕೆ ಕಂಪ್ಯೂಟರ್ ಮುಂದೆ ಕೂರಿಸಿ, ವಿಭಿನ್ನ ಐಡಿಗಳು ಹಾಗೂ ಅತ್ಯಾಧುನಿಕ ಬಾಟ್ಗಳ ಮೂಲಕ ಸೆಕೆಂಡ್ಗಳಲ್ಲಿ ಎಲ್ಲ ಟಿಕೆಟ್ಗಳನ್ನು ಕಬಳಿಸುತ್ತಿವೆ.
ಹೀಗೆ ಅಕ್ರಮವಾಗಿ ಬಲ್ಕ್ ಬುಕ್ಕಿಂಗ್ ಮಾಡುವ ಮಾಫಿಯಾ ಜಾಲವು, ಮೂಲತಃ 500 ರೂಪಾಯಿ ಇರುವ ಅಧಿಕೃತ ಸರ್ಕಾರಿ ಟಿಕೆಟ್ ಅನ್ನು ಹೋಂ ಸ್ಟೇ ಪ್ಯಾಕೇಜ್ಗಳ ಹೆಸರಿನಲ್ಲಿ 1500 ರಿಂದ 2000 ರೂಪಾಯಿಗಳ ವರೆಗೆ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ ಹಣ ಮಾಡುತ್ತಿದೆ ಎಂಬ ಗಂಭೀರ ಆರೋಪವು ಕೇಳಿಬರುತ್ತಿದೆ.
ಇನ್ನು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ರೆ ರಾಜ್ಯಾದ್ಯಂತ ಚಾರಣ ಬುಕ್ಕಿಂಗ್ ಅನ್ನು ಅರಣ್ಯ ವಿಹಾರ ವೆಬ್ಸೈಟ್ ಮೂಲಕ ಐಸಿಟಿ ತಂಡ ನಿರ್ವಹಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳಿಗೆ ಈ ವೆಬ್ಸೈಟ್ನ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ ಎನ್ನುತ್ತಿದ್ದಾರೆ.
ಒಟ್ಟಾರೆ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬೇಕೆಂಬ ಸಾಮಾನ್ಯ ಪ್ರವಾಸಿಗರ ಆಸೆಗೆ ಈ ಟ್ರೆಕ್ಕಿಂಗ್ ಮಾಫಿಯಾ ತಣ್ಣೀರೆರಚುತ್ತಿದೆ. ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ನಡೆಯುತ್ತಿರುವ ಈ ಹಗಲು ದರೋಡೆಗೆ ಬ್ರೇಕ್ ಹಾಕಿ, ಪಾರದರ್ಶಕ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅರಣ್ಯ ಇಲಾಖೆ ಮತ್ತು ಸರ್ಕಾರ ಸಾಮಾನ್ಯ ಚಾರಣಿಗರ ಹಿತ ಕಾಯಬೇಕಿದೆ.
Massive irregularities in online ticket booking for Netravati Peak
Leave a comment