ಚಿಕ್ಕಮಗಳೂರು- ಸಂವಿಧಾನ ಬದ್ಧ ಹಕ್ಕುಗಳಾದ ಶಿಕ್ಷಣ ಮತ್ತು ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಕ ಮಾಡುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ವಿಧಾನಪರಿಷತ್ ಶಾಸಕ ಎಸ್.ಎಲ್ ಬೋಜೇಗೌಡ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಹೇಳುವ ಸರ್ಕಾರ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳ ಜೊತೆಗೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಕೂಡಲೇ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಶಿಕ್ಷಕರ ಕೊರತೆಯ ನಡುವೆಯು ಎಸ್‌ಎಸ್‌ಎಲ್‌ಸಿ, ಪಿಯುಸಿ ಯಲ್ಲಿ ಜಿಲ್ಲೆಯಲ್ಲಿ ಒಟ್ಟು ೧೬೫ ಶಾಲೆಗಳಲ್ಲಿ ಶೇ ೧೦೦ ರಷ್ಟು ಫಲಿತಾಂಶ ಬಂದಿದೆ, ಈ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲೆ ಪಠ್ಯ-ಪುಸ್ತಕಗಳನ್ನು ವಿತರಣೆ ಮಾಡಬೇಕು, ಉಪನ್ಯಾಸಕರ ಕೊರತೆ ಎಂಬ ನೆಪವೊಡ್ಡಿ ಜೂನಿಯರ್ ಕಾಲೇಜುಗಳನ್ನು ಮುಚ್ಚುವ ಹುನ್ನಾರ ನೆಡೆಯುತ್ತಿದೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿಷಯಕ್ಕೆ ಪೂರ್ಣ ಪ್ರಮಾಣದ ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆಲಸಗಳನ್ನು ಶಿಕ್ಷಕರ ಹೆಗಲಿಗೆ ಹಾಕುತ್ತಿರುವ ಅವೈಜ್ಞಾನಿಕ ನೀತಿಯನ್ನು ಖಂಡಿಸಿದ ಅವರು ಕೂಡಲೇ ಅನ್ಯ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
ಪ್ರಸ್ತುತ ರಾಜ್ಯದಲ್ಲಿ ೧೩೪೦ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಈ ಕಾಲೇಜುಗಳಿಗೆ ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ ೧೨೯೧೩ ಆಗಿದೆ ಆದರೆ ಪ್ರಸ್ತುತ ೭೬೪೪ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ೫೨೬೯ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.
ಈ ಉಪನ್ಯಾಸಕರಲ್ಲಿ ಸುಮಾರು ಶೇ ೫೦ ರಷ್ಟು, ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಮೂಲಭೂತ ಸೌಕರ್ಯಗಳ ಕೊರತೆ ಜೊತೆಗೆ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಹುದ್ದೆಗಳು ಖಾಲಿ ಇದ್ದರು ಅವುಗಳನ್ನು ನಿಭಾಯಿಸಿಕೊಂಡು ತರಗತಿಗಳನ್ನು ನೆಡೆಸಲಾಗುತ್ತಿದೆ, ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರುಗಳ ಶ್ರಮ ಶ್ಲಾಘನೀಯ ಎಂದರು.
ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ. ಇಲಾಖೆ ಇತ್ತೀಚೆಗೆ ಹೊರಡಿಸಿರುವ ಆದೇಶದನ್ವಯ ಉಪನ್ಯಾಸಕರು ರಜಾ ಅವಧಿಯಲ್ಲಿ ಬಿರುಬಿಸಿಲಿನ ನಡುವೆ ದಾಖಲಾತಿ ಆಂದೋಲನ ನೆಡೆಸಬೇಕಾಗಿದೆ ಜೊತೆಗೆ ಇದೇ ಸಮಯದಲ್ಲಿ ೪ ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ವಾರದ ೩ ದಿನ ಬೇರೊಂದು ಕಾಲೇಜಿಗೆ ನಿಯೋಜನೆ ಮಾಡುವಂತೆ ನಿರ್ದೇಶಕರು ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ನೀಟ್ ಪರೀಕ್ಷೆಯಲ್ಲಿ ನೆಡೆದಿರುವ ಹಗರಣಕ್ಕೆ ಸಂಬಂದಿಸಿದಂತೆ ವಿದ್ಯಾರ್ಥಿಗಳನ್ನು ತಪ್ಪಿತಸ್ಥರನ್ನಾಗಿ ಮಾಡುವುದನ್ನು ಬಿಟ್ಟು, ವ್ಯವಸ್ಥೆ ಮತ್ತು ಕಾರಣಕರ್ತರಾದವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ ಅವರು ಇದರ ಹೊಣೆಯನ್ನು ಸರ್ಕಾರ ಹೊರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರುಗಳಾದ ದಿನೇಶ್, ಸಿ.ಕೆ ಮೂರ್ತಿ, ದೇವಿಪ್ರಸಾದ್, ಸಂತೋಷ್, ಸತೀಶ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
Education should be prioritized by appointing teachers and lecturers.
Leave a comment