ಚಿಕ್ಕಮಗಳೂರು: ಕಾಫಿನಾಡಿನ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವು ಸಂಭ್ರಮದ ಬದಲು ಸರ್ಕಾರದ ವಿರುದ್ಧದ ಆಕ್ರೋಶದ ಅಖಾಡವಾಗಿ ಮಾರ್ಪಟ್ಟಿತು.
ಸಮಾರಂಭದಲ್ಲಿ ಶಾಸಕ ತಮ್ಮಯ್ಯ ಅವರು ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಬಂಜಾರ ಸಮುದಾಯದ ಮುಖಂಡರು ಏಕಾಏಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಹಂಚಿಕೆಯಲ್ಲಿ ಬಂಜಾರ ಸಮಾಜಕ್ಕೆ ದೊಡ್ಡ ಮಟ್ಟದ ದ್ರೋಹ ಎಸಗಿದೆ ಎಂದು ಗುಡುಗಿದ ಪ್ರತಿಭಟನಾಕಾರರು, ಕೇವಲ ಮತ ಬ್ಯಾಂಕ್ಗಾಗಿ ನಮ್ಮ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಯಾಬಿನೆಟ್ ನಿರ್ಧಾರದಂತೆ ಶೇ. 5ರಷ್ಟು ಮೀಸಲಾತಿಯಲ್ಲಿ ಕೇವಲ ಶೇ. 1ರಷ್ಟನ್ನು ಅಲೆಮಾರಿಗಳಿಗೆ ನೀಡಿ, ಉಳಿದ ಶೇ. 4ರಷ್ಟರಲ್ಲಿ ಬರೋಬ್ಬರಿ 69 ಜಾತಿಗಳನ್ನು ಸೇರಿಸುವ ಮೂಲಕ ಬಂಜಾರ ಸಮುದಾಯವನ್ನು ‘ಸಿ’ ವರ್ಗಕ್ಕೆ ತಳ್ಳಿ ಅನ್ಯಾಯ ಮಾಡಲಾಗಿದೆ ಎಂಬುದು ಸಮಾಜದ ಪ್ರಮುಖ ಆರೋಪವಾಗಿದೆ. ಈ ಅವೈಜ್ಞಾನಿಕ ವರ್ಗೀಕರಣದಿಂದಾಗಿ ಮುಂದಿನ 20 ವರ್ಷಗಳ ಕಾಲ ಬಂಜಾರ ಯುವಕರಿಗೆ ಸರ್ಕಾರಿ ನೌಕರಿ ಕನಸಿನ ಮಾತಾಗಲಿದೆ ಎಂದು ಅವರು ಅಳಲು ತೋಡಿಕೊಂಡರು.
ರಾಜ್ಯದ 42 ಕ್ಷೇತ್ರಗಳಲ್ಲಿ ಬಂಜಾರ ಮತಗಳೇ ನಿರ್ಣಾಯಕವಾಗಿದ್ದು, ಶಾಸಕ ತಮ್ಮಯ್ಯ ಅವರ ಗೆಲುವಿನಲ್ಲೂ ಸಮಾಜದ ಪಾಲು ದೊಡ್ಡದಿದೆ ಎಂಬುದನ್ನು ನೆನಪಿಸಿದ ಮುಖಂಡರು, ಇನ್ನುಂದೆ ನಮ್ಮ ಬೇಡಿಕೆ ಈಡೇರದಿದ್ದರೆ ಜನಪ್ರತಿನಿಧಿಗಳಿಗೆ ಎಲ್ಲೆಡೆ ಫೇರಾವ್ ಹಾಕುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
Outrage against the government on Sant Sevalal Jayanti
Leave a comment