ಚಿಕ್ಕಮಗಳೂರು: ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿಯಿಂದ ೨೦೮ ನೇ ಭೀಮಾ ಕೋರೆಗಾಂವ್ ವಿಜಯೋತ್ಸವ(ಶೌರ್ಯ) ದಿನದ ಕಾರ್ಯಕ್ರಮವನ್ನು ಜ.೭ ರಂದು ಬುಧವಾರ ನಗರದ ಅಜಾದ್ ವೃತ್ತದಲ್ಲಿ ಸಂಜೆ ೪ ಗಂಟೆಗೆ ಆಯೋಜಿಸಲಾಗಿದೆ ಎಂದು ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದರ ಅಂಗವಾಗಿ ಅಂದು ಮಧ್ಯಾಹ್ನ ೧ ಗಂಟೆಗೆ ಕೆಇಬಿ ವೃತ್ತದಿಂದ ಎಂಜಿ ರಸ್ತೆ ಮಾರ್ಗವಾಗಿ ಬೃಹತ್ ಮೆರವಣಿಗೆ, ಡಿಜೆ ಮತ್ತು ವಿವಿಧ ಕಲಾತಂಡಗಳೊಂದಿಗೆ ಅಜಾದ್ ವೃತ್ತ ತಲುಪಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸದುರ್ಗ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯವನ್ನು ವಹಿಸಲಿದ್ದು, ಸಂಶೋಧಕ ಇತಿಹಾಸ ತಜ್ಞ ಪ್ರೊ. ತಲಕಾಡು ಚಿಕ್ಕರಂಗೇಗೌಡ, ಕಾರ್ಮಿಕ ಕಲ್ಯಾಣ ಸಚಿವ ಸಂತೋಷ್ ಎಸ್ ಲಾಡ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಹೆಚ್.ಡಿ. ತಮ್ಮಯ್ಯ, ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಚಿವರು ಹಾಗೂ ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷರಾದ ಬಿ.ಬಿ ನಿಂಗಯ್ಯ ವಹಿಸಲಿದ್ದಾರೆ ಎಂದರು.
ಇದರ ಪೂರ್ವಭಾವಿಯಾಗಿ ಜ.೬ ರಂದು ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಬೃಹತ್ ಬೈಕ್ ಜಾಥಾ ಏರ್ಪಡಿಸಲಾಗಿದ್ದು, ಜಾಥಾ ಅಜಾದ್ ಪಾರ್ಕ್ನಿಂದ ಹೊರಟು, ಐಜಿ ರಸ್ತೆ, ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯರಸ್ತೆ, ಎಂಜಿ ರಸ್ತೆ, ಅಂಬೇಡ್ಕರ್ ವೃತ್ತ ಬಳಸಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಅಂಬೇಡ್ಕರ್ ಮುತ್ಥಳಿಗೆ ಮಾಲಾರ್ಪಣೆ ಮಾಡಿ, ಬೈಪಾಸ್ ರಸ್ತೆ ಮೂಲಕ ಹಿರೇಮಗಳೂರು ಮಾರ್ಗವಾಗಿ ಅಜಾದ್ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಸ್ತ ನಾಗರಿಕರು, ವಿವಿಧ ಜನಪರ ಸಂಘಟನೆಗಳ ಪದಾಧಿಕಾರಿಗಳು, ಯುವಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೋರೆಗಾಂವ್ ವಿಜಯೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರುಗಳಾದ ಟಿ.ಎಲ್ ಗಣೇಶ್, ಪುರ ಚಂದ್ರು, ಉಮೇಶ್, ಹೇಮಂತ್, ಮಂಜಯ್ಯ, ಅರುಣ ಮತ್ತಿತರರು ಉಪಸ್ಥಿತರರಿದ್ದರು.
Bhima Koregaon victory celebration at Azad Circle on January 7th
Leave a comment