ಚಿಕ್ಕಮಗಳೂರು: ಪ್ರೀತಿಗೆ ಅಡ್ಡಿಪಡಿಸಿದ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.
ರಾಜೇಶ್ (27) ಕೊಲೆಯಾದ ದುರ್ದೈವಿ. ಕಲ್ಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರುಣ್ ಎಂಬಾತನು ರಾಜೇಶ್ರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಯಾದ ರಾಜೇಶ್ ಅವರ ಪತ್ನಿಯ ಸಹೋದರಿಯನ್ನು ಆರೋಪಿ ವರುಣ್ ಪ್ರೀತಿಸುತ್ತಿದ್ದನು ಎನ್ನಲಾಗಿದೆ.
ಈ ಪ್ರೇಮ ಸಂಬಂಧಕ್ಕೆ ರಾಜೇಶ್ ಅಡ್ಡಿಪಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಇದೇ ವಿಚಾರವಾಗಿ ರಾಜೇಶ್ ಮತ್ತು ವರುಣ್ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು.
ಇಂದು ರಾಜೇಶ್ ಬಾಳೆಹೊನ್ನೂರು ಸಮೀಪದ ಬಾಸಾಪುರದಿಂದ ಕಲ್ಕೆರೆ ಗ್ರಾಮದಲ್ಲಿರುವ ತಮ್ಮ ಪತ್ನಿಯ ಮನೆಗೆ ಹೋಗಿದ್ದರು. ಅಲ್ಲಿ ವರುಣ್, ರಾಜೇಶ್ಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರಾಜೇಶ್ರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಆರೋಪಿ ವರುಣ್ ಕೊಪ್ಪ ತಾಲೂಕಿನ ಮಂಡಗದ್ದೆ ಮೂಲದವನಾಗಿದ್ದು ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Obstacle to love in Kalkere village – youth murdered
Leave a comment