ಚಿಕ್ಕಮಗಳೂರು: ಇಂದಿನ ದಿನಮಾನಗಳಲ್ಲಿ ಜನರ ಮನಸ್ಥಿತಿ ಬದಲಾಗಿದ್ದು, ಸಾಮಾಜಿಕ ಜಾಲತಾಣ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತಿವೆ. ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಜನರಲ್ಲಿ ಸಹಿಷ್ಣುತೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ವಿಷಾದ ವ್ಯಕ್ತಪಡಿಸಿದರು
ನಗರದ ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಹುತಾತ್ಮರ ಸ್ಮಾರಕದ ಆವರಣದಲ್ಲಿ ಇಂದು ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಪ್ರಭಾವದ ನಡುವೆ ಸ್ವಯಂ ತೀರ್ಮಾನಕ್ಕೆ ಬರುವ ಜನರು ಕೇವಲ ೨೦ ಸೆಕೆಂಡ್‌ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮನೋಭಾವದಿಂದ ಜನರು ಹೊರ ಬರಬೇಕು ಎಂದು ಹೇಳಿದರು.
ಪ್ರತಿವರ್ಷ ಹುತಾತ್ಮರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದು ಅತ್ಯಂತ ವಿಷಾದದ ಸಂಗತಿ. ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ನಿರ್ವಹಣೆಯೇ ವಿಭಿನ್ನವಾಗಿದ್ದು, ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ನಡೆದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಬ್ಬಾಚರಣೆಗಳು, ಹಾಗೆಯೇ ದೇವೀರಮ್ಮ ಜಾತ್ರಾ ಮಹೋತ್ಸವದ ಕಳೆದ ಎರಡು ಮೂರು ದಿನಗಳೂ ಸೇರಿದಂತೆ ಸುಮಾರು ೭೫ ದಿನಗಳಲ್ಲಿ ಒಂದು ದಿನವೂ ರಜೆ ಇಲ್ಲದೆ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ದೇವೀರಮ್ಮ ಜಾತ್ರೋತ್ಸವದ ಸಲುವಾಗಿ ಸುಮಾರು ೭೫ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಟ್ಟವೇರಿ ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿದ್ದಾರೆ. ಅದಕ್ಕೆಲ್ಲ ಸಕಾರಾತ್ಮಕವಾಗಿ ಸ್ಪಂದಿಸಿ ಪೊಲೀಸರು ಕಾರ್ಯ ನಿರ್ವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ತುಕಡಿ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ, ೧೯೫೯ ರ ಅಕ್ಟೋಬರ್ ೨೧ ರಂದು ಗಡಿಯಲ್ಲಿರುವ ಲಡಾಖ್‌ನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಸೈನಿಕರು ಗಡಿ ಪ್ರವೇಶ ಮಾಡುವ ಪ್ರಯತ್ನದಲ್ಲಿದ್ದಾಗ ಕಡಿಮೆ ಶಸ್ತ್ರಾಸ್ತ್ರ ಹಾಗೂ ಕಡಿಮೆ ಸಂಖ್ಯೆಯಲ್ಲಿದ್ದ ಭಾರತದ ಧೀರ ಪೊಲೀಸರು ಅತ್ಯಂತ ದಿಟ್ಟತನದಿಂದ ಹೋರಾಡಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಅಂಥವರ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ೧೯೬೦ರ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಅಂದಿನಿಂದ ದೇಶಾದ್ಯಂತ ಪ್ರತೀ ವರ್ಷ ಅಕ್ಟೋಬರ್ ೨೧ ರಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತೀ ವರ್ಷ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಪ್ರಸ್ತಾಪಿಸಿ ಸ್ಮರಿಸುವುದು ರೂಢಿಯಾಗಿದೆ ಎಂದು ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು ೧೯೧ ಪೊಲೀಸರು ಸೇವೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಕರ್ನಾಟಕದ ೮ ಧೀರ ಪೊಲೀಸರು ಸೇರಿದ್ದು, ಪೊಲೀಸರ ತ್ಯಾಗ, ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಪೊಲೀಸರು ತಮ್ಮ ಕರ್ತವ್ಯದಲ್ಲಿ ತೊಡಗಿ ಕಾನೂನು ಸುವ್ಯವಸ್ಥೆ, ನಾಗರಿಕ ಆಸ್ತಿ ಪಾಸ್ತಿ ರಕ್ಷಣೆ ಅಪರಾಧ ತಡೆ ಹಾಗೂ ಪತ್ತೆ, ಆಂತರಿಕ ಭದ್ರತೆ ಹೀಗೆ ಹಲವು ಕರ್ತವ್ಯ ಪಾಲನೆಯ ಹಾದಿಯಲ್ಲಿ ಸದಾ ನಿರತರಾಗಿರುತ್ತಾರೆ. ಸಮಾಜದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಪೊಲೀಸ್ ಹುತಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆ ಮಾಡಲು ಅದೇ ಸಾರ್ವಜನಿಕರ ಸಹಕಾರ ಸಹ ಇಲಾಖೆಗೆ ಅತ್ಯಗತ್ಯ. ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ಸಾರ್ವಜನಿಕರು ಯಾವ ರೀತಿ ಸಂಭ್ರಮದಿಂದ ಹಬ್ಬಾಚರಣೆ ಮಾಡಬೇಕೆಂದು ಯೋಜನೆ ಹಾಕುತ್ತಿದ್ದರೆ, ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಈ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ಸಹ ಪೊಲೀಸರು ತ್ಯಾಗ ಬಲಿದಾನ ಮಾಡಿರುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಇದೇ ವೇಳೆ ಈ ವರ್ಷ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿ-ಸಿಬ್ಬಂದಿಯ ಪಟ್ಟಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಓದಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಕೆ.ಟಿ.ರಾಧಕೃಷ್ಣ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಿ.ಟಿ.ಜಯಕುಮಾರ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Although the number of educated people is increasing tolerance is decreasing.
Leave a comment