ಚಿಕ್ಕಮಗಳೂರು: ಕ್ರೈಸ್ತರ ಅಭಿವೃದ್ದಿ ನಿಗಮದ ಸೌಲಭ್ಯಗಳು ಪ್ರೊಟೆಸ್ಟೆಂಟ್ ಕ್ರೈಸ್ತರಿಗೂ ವಿಸ್ತರಿಸಬೇಕು ಎಂದು ಪ್ರೊಟೆಸ್ಟೆಂಟ್ ಕ್ರೈಸ್ತರ ಮಹಾಸಭಾದ ಪಾದ್ರಿ ಕೆ.ಕೆ.ವರ್ಗೀಸ್ ಒತ್ತಾಯಿಸಿದರು.
ಬ್ರಿಟಿಷರ ಕಾಲದಲ್ಲಿ ನೀಡಿದ್ದ ಕ್ರೈಸ್ತರ ಸ್ಮಶಾನ ಭೂಮಿಗಳಿದ್ದು, ಈಗ ಜನಸಂಖ್ಯೆ ಹೆಚ್ಚಾಗಿದೆ. ಶವ ಸಂಸ್ಕಾರಕ್ಕೂ ಸ್ಥಳದ ಕೊರತೆ ಎದುರಾಗಿದೆ. ಸ್ಮಶಾನ ಭೂಮಿ ಒದಗಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಪ್ರೊಟೆಸ್ಟೆಂಟ್ ಕ್ರೈಸ್ತರಿಗೂ ವಿಸ್ತರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಾಲ, ಸವಲತ್ತು ಪ್ರತ್ಯೇಕವಾಗಿ ನಿಗದಿಪಡಿಸಬೇಕು. ನಿಗಮದ ಆಡಳಿತ ಮಂಡಳಿಯಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಒಳ ಮೀಸಲಾತಿ ವಿಧಾನ ಅಳವಡಿಸಬೇಕು. ಹಿಂದೂ ಮಠಗಳಿಗೆ ನೀಡುತ್ತಿರುವ ಅನುದಾನ ಮಾದರಿಯಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರ ಮಹಾಸಭಾಕ್ಕೂ ಅನುದಾನ ನೀಡ ಬೇಕು. ಹಜ್ ಯಾತ್ರಿಕರಿಗೆ ನೀಡುವಂತೆ ಜೆರುಸೆಲಂ ಏಸು ಪುಣ್ಯಭೂಮಿಗೆ ತೆರಳಲು ಕ್ರೈಸ್ತರಿಗೂ ಸಹಾಯಧನ ನೀಡಬೇಕು ಎಂದರು.
ಮುಜರಾಯಿ ದೇವಾಲಯದ ಅರ್ಚಕರಿಗೆ ನೀಡುವ ಮಾಸಿಕ ವೇತನದ ಮಾದರಿಯಲ್ಲಿ ಫಾಸ್ಟರ್ ಮತ್ತು ರೆವರೆಂಡ್‌ಗಳಿಗೂ ವೇತನ ಹಾಗೂ ಗುರುತಿನ ಚೀಟಿ ನೀಡಬೇಕು ಆಗ್ರಹಿಸಿದರು.
‘ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆ ಕ್ರೈಸ್ತರಿಗೆ ಮಾರಕವಾಗಿದ್ದು, ಈ ಕಾಯ್ದೆಯನ್ನು ಹಿಂಪಡೆಯಬೇಕು. ಚರ್ಚ್, ಆರಾಧನಾಲಯ, ಸಮುದಾಯ ಭವನಗಳಿಗೆ ಧಕ್ಕೆ ಮಾಡಲಾಗುತ್ತಿದೆ. ಪ್ರಾರ್ಥನೆಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಕ್ರಿಸ್‌ಮಸ್ ಹಬ್ಬ ಆಚರಣೆಗೆ ತೊಂದರೆ ನೀಡಲಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು’ ಎಂದು ಮನವಿ ಮಾಡಿದರು.
ಫಾಸ್ಟರ್ ಎಸ್.ಸುಂದರಬಾಬು, ರೆವರೆಂಡ್ ಬಾಬು ಪೌಲೋಸ್ ಉಪಸ್ಥಿತರಿದ್ದರು.
Christian Development Corporation facilities should be extended to Protestant Christians as well.
Leave a comment