ಚಿಕ್ಕಮಗಳೂರು: ಪಾಪ ಅವರು ಸದನದಲ್ಲಿ ಮಾಡಬಾರದ ಅವಮಾನ ಮಾಡಿದ್ದಾರೆ. ಈಗ ಬಾಗಿನ ನೀಡಲು ಬಂದಿದ್ದಾರೆ. ಬಿಜೆಪಿಯವರ ಸೋಗಿನ ಬಾಗಿನದ ಅವಶ್ಯಕತೆ ನನಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನ ಜನತೆ ನನಗೆ ಮನೆ ಮಗಳಂತೆ ಸ್ವಾಗತ ಕೋರಿದ್ದಾರೆ. ಅದು ನನಗೆ ಸಾಕು ಎಂದರು.
ಬೆಳಗಾವಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಕಠಿಣ ಶಬ್ದದಿಂದ ಖಂಡಿಸುತ್ತೇನೆ. ಆರೋಪಿಗಳು ಯಾರೇ ಆಗಿದ್ದರೂ ಅತ್ಯಂತ ಕಠಿಣವಾದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ಪ್ರಕರಣವನ್ನು ಕಂಪ್ಲೀಟ್ ಆಗಿ ಟ್ರ್ಯಾಕ್ ಮಾಡುತ್ತಿದ್ದೇನೆ. ಸಂತ್ರಸ್ತೆಯ ಮನೆಯವರು ಹಾಗೂ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಜೊತೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿನ್ ಟು ಪಿನ್ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಅವರಿಗೆ ಕ್ಷಮೆ ಎನ್ನುವುದೇ ಇಲ್ಲ ಎಂದು ಹೇಳಿದರು.
ಬಿಜೆಪಿ ನಡೆಸುತ್ತಿರುವ ಕಲಬುರ್ಗಿ ಚಲೋ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವವಿದೆ. ಅವರು ಎಲ್ಲಿಗೆ ಬೇಕಾದರೂ ಚಲೋ ಕೊಡಬಹುದು ಎಂದು ವ್ಯಂಗ್ಯವಾಡಿದರು.
ಬಾಗಿನ ಕೊಡಲು ಮುಂದಾದ ಬಿಜೆಪಿ: ಕಾಫಿ ನಾಡಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅರಿಶಿನ ಕುಂಕುಮ ಕಾಯಿ ಬಳೆ ಸಹಿತ ಬಾಗಿನ ನೀಡಿ ಸ್ವಾಗತಿಸಲು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.
ಸಚಿವರು ನಗರದ ಪ್ರವಾಸಿ ಮಂದಿರದಲ್ಲಿರುವ ವಿಷಯ ತಿಳಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಹೂವು, ಹಣ್ಣು, ಬಳೆ, ಅರಿಸಿನ ಕುಂಕುಮ, ಲಕ್ಷ್ಮಿ ವಿಗ್ರಹ ಸೇರಿದಂತೆ ಬಾಗಿನ ಸಹಿತ ಪ್ರವಾಸಿ ಮಂದಿರದ ಎದುರು ತೆರಳಿದ್ದರು.
ಆದರೆ ಪೊಲೀಸರು ಪ್ರವಾಸಿ ಮಂದಿರದ ಒಳಗೆ ತೆರಳಲು ಬಿಜೆಪಿ ಕಾರ್ಯಕರ್ತೆಯರಿಗೆ ಅವಕಾಶ ನೀಡಲಿಲ್ಲ.
ಹೀಗಾಗಿ ಬಾಗಿನ ಹಿಡಿದು ಕಾರ್ಯಕರ್ತೆಯರು ಪ್ರವಾಸಿ ಮಂದಿರದ ಗೇಟ್ ಬಳಿಯೇ ಕಾದು ನಿಂತಿದ್ದರು. ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳಿದರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರತ್ತ ತಿರುಗಿಯೂ ನೋಡಲಿಲ್ಲ.
ಇದರಿಂದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತೆಯರು, ಸಚಿವರ ಮನೆಗೆ ಯಾರಾದರೂ ಹೋದರೆ ಅರಿಶಿನ ಕುಂಕುಮ ಕೊಡುವುದಿಲ್ಲವೇ? ಕಾಂಗ್ರೆಸ್ಸಿಗರಿಗೆ ಅರಿಶಿನ ಕುಂಕುಮ ಕಂಡರೆ ಭಯ ಎಂದು ಲೇವಡಿ ಮಾಡಿ ತಾವು ತಂದಿದ್ದ ಬಾಗಿನವನ್ನು ಹಿರಿಯ ಬಿಜೆಪಿ ಕಾರ್ಯಕರ್ತೆಗೆ ನೀಡಿ ವಾಪಸ್ ತೆರಳಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ರೋಡ್ ಷೋ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ನಡುವೆ ಟಾಕ್ ವಾರ್ ನಡೆದ ಬಳಿಕ ಮೊದಲ ಬಾರಿಗೆ ಕಾಫಿ ನಾಡು ಚಿಕ್ಕಮಗಳೂರಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರ್ಜರಿ ರೋಡ್ ಶೋ ನಡೆಸಿದರು.
ನಗರದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ್ನ ಬೋಳ ರಾಮೇಶ್ವರ ದೇವಸ್ಥಾನದ ಆವರಣದಿಂದ ಹನುಮಂತಪ್ಪ ವೃತ್ತದ ವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಸಚಿವೆಗೆ ಜೈಕಾರ ಹಾಕಿದರು.
ಇನ್ನು ರೋಡ್ ಶೋ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ದಾರಿ ಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ಜೆಸಿಬಿ ಬಳಸಿ ಬೃಹತ್ ಹಾರ ಹಾಕುವ ಮೂಲಕ ಸಚಿವೆಗೆ ಸ್ವಾಗತಿಸುತಿದ್ದ ದೃಷ್ಯ ಸಾಮಾನ್ಯವಾಗಿತ್ತು.
I don’t need the BJP’s pretense.
Leave a comment