ಚಿಕ್ಕಮಗಳೂರು: ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ವಕೀಲರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ತರೀಕೆರೆ, ಚಿಕ್ಕಮಗಳೂರು, ಕಡೂರು ಮತ್ತು ಮೂಡಿಗೆರೆಯಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ನಂತರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಭೂವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಉಪವಿಭಾಗಾಧಿಕಾರಿಗೆ ತಲುಪಿಸಲು ಕಡೂರಿನ ವಕೀಲ ಹರೀಶ್ ಬುಧವಾರ ಸಂಜೆ ತೆರಳಿದ್ದರು. ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶ ಕಾನೂನಿಗೆ ವಿರುದ್ಧವಾಗಿದೆ ಎಂದು ಹರೀಶ್ ಅವರ ಕಕ್ಷೆದಾರರು ಮುಖ್ಯಮಂತ್ರಿಗೆ ದೂರ ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಉಪವಿಭಾಗಾಧಿಕಾರಿ ಕಾಂತರಾಜ್ ಅವರು ವಕೀಲ ಹರೀಶ್ ಅವರನ್ನು ಮನ ಬಂದಂತೆ ನಿಂದಿಸಿದ್ದಾರೆ ಎಂಬುದು ವಕೀಲರ ಆರೋಪ.
ಹೈಕೋರ್ಟ್ ಆದೇಶದ ಪ್ರತಿಯನ್ನು ಮುಖದ ಮೇಲೆ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮೊಬೈಲ್ ಫೋನ್ ಕಸಿದುಕೊಂಡರು. ಬೇರೆ ವ್ಯಕ್ತಿಗಳನ್ನು ಕಚೇರಿಗೆ ಕರೆಸಿಕೊಂಡು ಬೆದರಿಸಿದರು. ಪೊಲೀಸರನ್ನೂ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದರು’ ಎಂದು ವಕೀಲ ಹರೀಶ್ ಜಿಲ್ಲಾಧಿಕಾರಿಗೆ ವಿವರಿಸಿದರು.
Lawyers protest against Tarikere Sub-Divisional Officer K.J. Kantaraj
Leave a comment