ಚಿಕ್ಕಮಗಳೂರು :
ಮಲೆನಾಡಿನಲ್ಲಿ ಮರೆಯಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭ ಆಗಿರುವ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ದಶಕಗಳ ನಂತರ ಇದೀಗ ಮತ್ತೆ ರಾತ್ರೋರಾತ್ರಿ ಪ್ರತ್ಯಕ್ಷ ಆಗಲು ಕಾರಣವೇನು ಎಂದು ಊಹೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ ಹಾಗೂ ಜಯಣ್ಣ ಕಾಣಿಸಿಕೊಂಡಿರುವುದು ಮತ್ತೆ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಗರಿಗೆದರುವುದೇ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ಕೇರಳ ರಾಜ್ಯದ ಅಡಗುತಾಣಗಳಲ್ಲಿದ್ದ ನಕ್ಸಲರಿಗೆ ಅಲ್ಲಿರುವುದು ಸೇಫಲ್ಲ ಎಂಬ ಕಾರಣಕ್ಕೆ ಮಲೆನಾಡು ಮತ್ತು ಪಶ್ಚಿಮಘಟ್ಟ ಪ್ರದೇಶ ಅಡಗುತಾಣ ಮಾಡಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ 2000ನೇ ಇಸವಿ ವೇಳೆಗೆ ಜಿಲ್ಲೆಯಲ್ಲಿ ತೀವ್ರಗೊಂಡಿದ್ದ ನಕ್ಸಲ್ ಚಟುವಟಿಕೆ ನಾಯಕ ಸಾಕೇತ್ ರಾಜನ್ ಮರಣ ನಂತರ 2005ರಲ್ಲಿ ಅಂದಿನ ಸರ್ಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಬಳಿಕ ಕೆಲ ನಕ್ಸಲರು ಶರಣಾಗತರಾಗಿ ನಾಗರಿಕ ಸಮಾಜಕ್ಕೆ ಮರಳಿದರೇ, ಕೆಲವರು ಇಲ್ಲಿರುವುದು ಸೇಫಲ್ಲವೆಂದು ಕೇರಳ ರಾಜ್ಯದ ಕಡೆಗೆ ಮುಖಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಕೇರಳ ರಾಜ್ಯ ಕೈಗೊಂಡ ದಿಟ್ಟ ಕ್ರಮಗಳಿಂದ ಅನೇಕ ನಕ್ಸಲರು ಬಂಧಿಗಳಾಗಿದ್ದು, ಕೆಲವರು ಮೃತಪಟ್ಟಿರುವ ಘಟನೆ ಬಳಿಕ ಕೇರಳ ರಾಜ್ಯವೂ ಸೇಫಲ್ಲವೆಂಬ ಕಾರಣಕ್ಕೆ ಕರ್ನಾಟಕ ರಾಜ್ಯದ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದ ಕಡೆ ಮುಖ ಮಾಡಿದ್ದಾರೆ ಎನ್ನುವ ಚರ್ಚೆಗಳು ಪ್ರಾರಂಭವಾಗಿವೆ.
ಇಷ್ಟು ಮಾತ್ರವಲ್ಲದೆ ಮಲೆನಾಡು ಭಾಗದಲ್ಲಿ ಸರ್ಕಾರ ವಿಧಿಸುತ್ತಿರುವ ಅರಣ್ಯ ಕಾಯ್ದೆಗಳು ನಕ್ಸಲ್ ಚಟುವಟಿಕೆ ಪ್ರೇರೆಪಿಸಿದೆ.
ಸರ್ಕಾರಕ್ಕೊಂದು ಎಚ್ಚರಿಕೆ ಸಂದೇಶವೇ, ಕ್ಷೀಣಿಸಿ ಹೋಗಿದ್ದ ನಕ್ಸಲ್ ಚಟುವಟಿಕೆ ಪುರ್ನಾರಂಭಿಸಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿಕೊಳ್ಳುವ ದೃಷ್ಟಿಯಿಂದ ಹಾಗೂ ಹೋರಾಟದಲ್ಲಿ ತೊಡಗಿಕೊಂಡಿರುವ ನಕ್ಸಲರ ವಯಸ್ಸು ಕುಂದುತ್ತಿರುವ ಹಿನ್ನೆಲೆ ಯಲ್ಲಿ ಇಲ್ಲಿ ಅಡಗುತಾಣ ಮಾಡಿಕೊಂಡು ಸಮಯ ಸಂದರ್ಭ ನೋಡಿ ಶರಣಾಗತಿಗಾಗಿ ಮಲೆನಾಡನ್ನು ಅಡಗುತಾಣವಾಗಿ ಮಾಡಿಕೊಂಡಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಚರ್ಚೆಗಳಿಗೂ ಜಯಪುರ ಸಮೀಪ ಕಡೇಗುಂದಿಯಲ್ಲಿ ಕಾಣಿಸಿಕೊಂಡಿರುವ ಮುಂಡಗಾರು ಲತಾ, ಜಯಣ್ಣ ಅಂಡ್ ಟೀಮ್ ಸೆರೆಯಾದ ಬಳಿಕವೇ ಉತ್ತರ ಸಿಗಲಿದೆ. ಸದ್ಯಕ್ಕಂತೂ ಇಂತ ಹ ಚರ್ಚೆಗಳು ಮಲೆನಾಡಿನಾದ್ಯಂತ ಹರಿದಾಡುತ್ತಿದೆ.
Leave a comment