ಚಿಕ್ಕಮಗಳೂರು: ಭದ್ರಾ ನದಿಯ ದಡದಲ್ಲಿ ನಿರಂತರ ವಾಮಾಚಾರಗಳು ನಡೆಯುತ್ತಲೇ ಇರುತ್ತದೆ. ಆದರೆ ಈಗ ನದಿಯ ಸಮೀಪವಿರುವ ದೇವಸ್ಥಾನದ ಮುಂಭಾಗದಲ್ಲಿಯೇ ವಾಮಾಚಾರ ಮಾಡಲಾಗಿದೆ. ಅದರಲ್ಲೂ ಯುಗಾದಿಯ ಹಬ್ಬದ ದಿನವೇ ಕಿಡಿಗೇಡಿಗಳ ಕೃತ್ಯ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿರವ ಕಾಲಭೈರವೇಶ್ವರ ದೇಗುಲದ ಎದುರು ಘಟನೆ ನಡೆದಿದೆ.
ಕಾಫಿನಾಡು ಚಿಕ್ಕಮಗಳೂರಿನ ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ ಕಳಸೇಶ್ವರ ದೇವರಿಗೆ ಹಲವು ದೇವಸ್ಥಾನಗಳು ಸೇರುತ್ತೆ. ಅದರಲ್ಲಿಯೂ ಗಿರಿಜಾ ಕಲ್ಯಾಣದ ಮೆರವಣಿಗೆ ನಡೆಯುವ ಮಾರ್ಗದಲ್ಲಿರುವ ಕಳಸ ಪಟ್ಟಣದ ಕಂಚಿಕೆರೆ ಗ್ರಾಮದ ಕಾಲಭೈರವನ ದೇವಸ್ಥಾನದ ಮುಂಭಾಗದಲ್ಲಿ ವಾಮಾಚಾರ ಮಾಡಲಾಗಿದೆ ಅದು ಹಿಂದೂಗಳ ಹೊಸ ವರ್ಷದ ಸಂಭ್ರಮದ ಯುಗಾದಿ ಹಬ್ಬದ ದಿನವೇ.
ಇನ್ನು ಕಳಸ ಸಮೀಪದ ಕಂಚಿಕೆರೆ ಕಾಲಭೈರವ ದೇವಸ್ಥಾನಕ್ಕೆ ಸಹಸ್ರ ಸಹಸ್ರ ಭಕ್ತರಿದ್ದಾರೆ. ಹೊರ ಜಿಲ್ಲೆ ಸೇರಿದಂತೆ ಸ್ಥಳೀಯರು ಕಾಲಭೈರವನನ್ನ ನಂಬಿ ಪೂಜಿಸುತ್ತಾರೆ. ದೇವಸ್ಥಾನದ ಮುಂದೆಯೇ ವಾಮಾಚಾರ ಮಾಡಿರುವುದರಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವೂ ವಾಮಾಚಾರ ನಡೆದ ಕಾಲಭೈರವ ದೇವಾಲಯದಲ್ಲಿ ಕಳ್ಳತನ ನಡೆದಿತ್ತು.
ಇಂದು ವಾಮಾಚಾರ ಮಾಡಲಾಗಿದೆ. ಕಳಸ ಭಾಗದಲ್ಲಿ ಹರಿಯುವ ಭದ್ರಾ ನದಿಯ ತಟದಲ್ಲಿ ವಾಮಾಚಾರದ ಪ್ರಕರಣ ನಡೆಯುತ್ತಲೇ ಇತ್ತು. ಈಗ ದೇವಸ್ಥಾನದ ಮುಂದೆಯೇ ಮಾಡಿದ್ದಾರೆ. ಅದು ಬಹುತೇಕ ತಡರಾತ್ರಿ ಎರಡರಿಂದ ಮೂರುಗಂಟೆಯೊಳಗೆ ನಡೆದಿರಬಹುದು ಎನ್ನಲಾಗುತ್ತಿದೆ. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ದೇವಾಲಯದ ಮುಂಭಾಗದಲ್ಲಿ ವಾಮಾಚಾರ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿಯವರಾ? ಅಥವಾ ಹೊರ ಭಾಗದವರಾ? ಅನ್ನೋ ಅನುಮಾನ ಸ್ಥಳೀಯರು ಮುಂದಿಟ್ಟಿದ್ದಾರೆ. ಪವಿತ್ರ ಭದ್ರಾ ನದಿ ಹಾಗೂ ಸುತ್ತಮುತ್ತ ಇರುವ ದೇವಸ್ಥಾನಗಳಲ್ಲಿ ಇತ್ತೀಚಿನ ದಿನದಲ್ಲಿ ವಾಮಾಚಾರ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಕಿಡಿಗೇಡಿಗಳ ಹೆಡೆಮುರಿ ಕಟ್ಟುವಂತೆ ಕಳಸದ ಜನರು ಒತ್ತಾಯಿಸಿದ್ದಾರೆ.
Witchcraft to Kalabhairavan temple in Kanchikere village
Leave a comment