ಚಿಕ್ಕಮಗಳೂರು: ದಸರಾ ನವರಾತ್ರಿ ನಾಡಹಬ್ಬದ ಅಂಗವಾಗಿ ತಾಲ್ಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ನೂ ರಾರು ಗ್ರಾಮಸ್ಥರು ಹಾಗೂ ಗ್ರಾಮ ದ ಪಟೇಲ ವಂಶಸ್ಥ ಎ.ಎನ್.ಮಹೇಶ್ ಸಾರಥ್ಯದಲ್ಲಿ ವಿಜಯದಶಮಿಯಂದು ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ಮೂಲಕ 28ನೇ ವರ್ಷದ ಅಂಬು ಒಡೆದು ಸಂಭ್ರಮದಿಂದ ಗುರುವಾರ ಆಚರಿಸಿದರು.
ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸಿ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥ ಎ.ಎನ್. ಮಹೇಶ್ ಹಾಗೂ ಕುಟುಂಬಸ್ಥರನ ಊರಿನ ಮುಖಂಡರು, ಗ್ರಾಮಸ್ಥರುಗಳು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಒಡೆಯುವ ದೊಡ್ಡಕೆರೆ ಬಳಿಗೆ ಕರೆ ತರಲಾಯಿತು.
ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ಶಮಿಪೂಜೆ ನೆರವರಿಸಿದ ನಂತರ ಊರಿನ ದೊಡ್ಡ ಕೆರೆ ಬಳಿಕ ಏರ್ಪಡಿಸಿದ ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆ ದು, ಬಂದೂಕಿನಿಂದ ಬಾಳೆ ದಿಂಡನ್ನು ತುಂಡರಿಸಿದರು. ಮಹಿಳೆಯರು, ಮಕ್ಕಳು ಕುಪ್ಪಳಿಸಿ ಸಂಭ್ರಮಾಚರಿಸಿದರು.
ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲಕ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಿದರು.
ವಿಜಯದಶಮಿ ಅಂಬುಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎ.ಎನ್.ಮಹೇಶ್ ವಿಜಯದಶಮಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ವಿಜಯ ನಗರ ಅರಸರ ಕಾಲದಿಂದಲೂ ದಸರಾ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಮೈಸೂರು ಅರಸರ ಕಾಲದಲ್ಲಿ ನವರಾತ್ರಿ ದಸರಾಗೆ ಮತ್ತಷ್ಟು ಮಹತ್ವ ಬಂದಿದೆ ಎಂದರು.
ರಾಜ ಪ್ರಜಾಪ್ರಭುತ್ವದ ಕಾಲದಲ್ಲಿ ಸ್ಥಳೀಯ ಆಡಳಿತ ನಡೆಸುವ ಪಟೇಲರನ್ನು ನೇಮಿಸಿ ಅವರಿಂದ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿತ್ತು. ಅಂದಿನಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ತಮ್ಮ ಕುಟುಂಬದ ಪೂರ್ವಜರು ಪಟೇಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.
ಅಂಬು ಉತ್ಸವವು ಅನೇಕ ವರ್ಷಗಳಿಂದ ಆರದವಳ್ಳಿಯ ಗ್ರಾಮದಲ್ಲಿ ಪಟೇಲ ವಂಶಸ್ಥರಿಂದ ಚಾಲನೆ ದೊರೆಯುತ್ತಿದೆ. ವಿಜಯದಶಮಿಯಂದು ಅಂಬುಹೊಡೆಯುವ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಹ್ವಾನ ನೀಡುವ ಮೂಲಕ, ಸಂಪ್ರದಾಯಿಕ ಉಡುಗೆ, ವಾದ್ಯಗೋಷ್ಠಿಯೊಂದಿಗೆ ಕರೆತಂದು ವಿಶೇಷ ಗೌರವದಿಂದ ಕಾಣುತ್ತಾರೆ. ಇದಕ್ಕೆ ನಮ್ಮ ಪೂರ್ವಜರು, ಗಾಮಸ್ಥರು, ಹಾಗೂ ಮುಖಂಡರ ಸಹಕಾರವೇ ಕಾರಣ ಎಂದರು.
ಮೈಸೂರು ಅರಸ್ ಆಳ್ವಿಕೆಯ ಸಂದರ್ಭದಲಿ ಸಂಸ್ಥಾನದ ಆಡಳಿತವು ಅಲ್ಲಲ್ಲಿ ಪಟೇಲರ ನೇತೃತ್ವದಲಿ ನಡೆಯುತ್ತಿತು. ಪಟೇಲರ ವ್ಯಾಪ್ತಿ ೨೦ ರಿಂದ ೩೦ ಹಳ್ಳಿ ಗಳಿದ್ದವು. ಮೈಸೂರಿನಲ್ಲಿ ಆರಂಭವಾದ ಸಾಂಪ್ರದಾಯಿಕ ದಸರಾ ಕಾರ್ಯಕ್ರಮ ನಾಡಿನಾದ್ಯಂತ ನಡೆಯಬೇಕೆಂಬುದು ಅರಸರ ಅಭಿಲಾಷೆಯಾಗಿತ್ತು. ಅಂತೆಯೇ ನಾಡಿನ ಎಲ್ಲಾ ಭಾಗದಲ್ಲಿಯೂ ಅಲ್ಲಿಯ ಸಂಸ್ಥಾನದ ಪಟೇಲರ ನೇತೃತ್ವದಲ್ಲಿ ನಡೆಯಬೇಕೆಂದು ತೀರ್ಮಾನಿಸಲಾಯಿತು. ಅದರಂತೆ ಆರದವಳ್ಳಿ ಸೇರಿದಂತೆ ಎಲ್ಲಾ ಸಂಸ್ಥಾನದಲ್ಲಿಯೂ ಆರಂಭಿಸಲಾಯಿತು.
ಸುಮಾರು ೧೦೦ ವರ್ಷಗಳ ಹಿಂದೆ ಆರದವಳ್ಳಿಯಲ್ಲಿ ಅಲ್ಲಿಯ ಪಟೇಲರಾದ ದೊಡ್ಡಪುಟ್ಟೇಗೌಡರು ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತಿದ್ದು ಅವರ ಕಾಲಾನಂತರದಲ್ಲಿ ಕಾರ್ಯಕ್ರಮ ಸ್ಥಗಿತಗೊಂಡಿತು. ಬಳಿಕ ಚಾಲನೆಗೆ ಬಂದಿದ್ದು ಕಳೆದ ೨೭ ವರ್ಷಗಳ ಹಿಂದೆ ಗಾಮಸ್ಥರು, ಹಿರಿಯರು ಸೇರಿದಂತೆ ಪಟೇಟರ ವಂಶಸ್ಥರಾದ ತಮ್ಮನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ನಿರಂತ ರವಾಗಿ ವಿಜ್ರಂಭಣೆಯಿಂದ ಗ್ರಾಮದಲ್ಲಿ ದಸರಾ ಕಾರ್ಯಕ್ರಮ ನಡೆಯುತ್ತಿದೆ.
ಈ ಸಂದರ್ಬದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ಗ್ರಾಮಸ್ಥರಾದ ಸುರೇಂದ್ರ, ಜಗದೀಶ್, ಎಪಿ ಜಯಣ್ಣ, ಕುಮಾರ್, ಲಲಿತಾಶಿವಾನಂದ್ , ಎಂ ನಿಂಗೇಗೌಡ, ಪಾಪೇಗೌಡ, ಷಡಕ್ಣರಿ, ಚಂದ್ರೇಗೌಡ, ಯೋಗೀಶ್, ಸಣ್ಣೇಗೌಡ, ವೀರಭದ್ರಚಾರ್ ಇದ್ದರು.
Traditional Vijayadashami celebrations in Aradavalli village
Leave a comment